ನಟಿ ಹರ್ಷಿಕ ಪೂಣಚ್ಚ, ನಟ ಭುವನ್ ಮೇಲೆ ಹಲ್ಲೆಗೆ ಯತ್ನ: ಬೆಂಗಳೂರು ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ ಹರ್ಷಿಕ ಪೂಣಚ್ಚ

ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ “ಕರಾಮಾ” ಎಂಬ ರೆಸ್ಟೊರೆಂಟ್ ಬಳಿಯಲ್ಲಿ ನಟಿ ಹರ್ಷಿಕ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ಹರ್ಷಿಕ ಪೂಣಚ್ಚ ತಮ್ಮ ಇನ್ಸ್ ಸ್ಟಾಗ್ರಾಮ್ ಪೇಜ್ ನಲ್ಲಿ ಆತಂಕ ಹಂಚಿಕೊಂಡಿದ್ದಾರೆ.. ಅವರ ಪೋಸ್ಟ್ ನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.
ನಮಸ್ಕಾರ, ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯ ವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.
ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ “ಕರಾಮಾ” ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು , ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು. ನನ್ನ ಪತಿ “ಇನ್ನು ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ” ಎಂದು ಹೇಳಿದರು ಏಕೆಂದರೆ ಅವರು ಸಂಭವನೀಯ ಘಟನೆ ಬಗ್ಗೆ ಮಾತನಾಡುತ್ತಿದ್ದು ಅದರಲ್ಲಿ ಅರ್ಥವಿರಲಿಲ್ಲ.
ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು, ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು. ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು ಏಕೆಂದರೆ ಅವರು ಸಾಮಾನ್ಯವಾಗಿ ತುಂಬಾ ಸಿಟ್ಟು ಸ್ವಭಾವದವರು. 2 – 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 – 30 ಸದಸ್ಯರ ಗುಂಪು ಜಮಾಯಿಸಿತು ಮತ್ತು ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತು, ಅದನ್ನು ಬಹಳ ಕೌಶಲ್ಯದಿಂದ ತಮ್ಮ ಕಡೆಗೆ ಎಳೆಯಲು ಪ್ರಯತ್ನಿಸಿದರು. ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು ಅದನ್ನು ಹಿಡಿದಿಟ್ಟುಕೊಂಡು ನನಗೆ ಕೊಟ್ಟರು.
ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರೀಯಿಸಲಿಲ್ಲ. ಅಲ್ಲದೆ ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು. ಅವರು ನೀವು ನಮ್ಮ ಪ್ರದೇಶಕ್ಕೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. “ಯೇ ಲೋಕಲ್ ಕನ್ನಡ್ ವಾಲಾ ಹೇ” (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತ್ರ ಮಾತನಾಡಿದಾಗ ಹೇಳಿದರು ಎಂದು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth