ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ: ಒಟ್ಟಾಗಿ ಮುನ್ನಡೆಯುವ ಸಂಕಲ್ಪ ಮಾಡಿದ ಕಾಂಗ್ರೆಸ್ ನಾಯಕರು

b.k.hariprasad
21/06/2026

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ‘ಸಂಕಲ್ಪ ಸಮಾವೇಶ’ದಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಿದರು. ನೂತನ ಅಧ್ಯಕ್ಷರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿದರು.

ಪದಗ್ರಹಣದ ಬಳಿಕ ಮಾತನಾಡಿದ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, “141 ವರ್ಷಗಳ ಇತಿಹಾಸವಿರುವ ಪವಿತ್ರ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯನ್ನು ನನಗೆ ನೀಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಶತಕೋಟಿ ನಮಸ್ಕಾರಗಳು,” ಎಂದರು.

“ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಕೊಡುಗೆ ಇಲ್ಲದ ಬಿಜೆಪಿ ಮತ್ತು ಆರ್‌ ಎಸ್‌ ಎಸ್ ಇಂದು ಸಂವಿಧಾನವನ್ನೇ ಮುಗಿಸಲು ಹೊರಟಿವೆ. ಸಾಂವಿಧಾನಿಕ ಸಂಸ್ಥೆಗಳನ್ನು ಆಯುಧಗಳನ್ನಾಗಿ ಬಳಸಿಕೊಳ್ಳುತ್ತಿವೆ. ನಮ್ಮ ಮುಂದೆ 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆಗಳ ದೊಡ್ಡ ಸವಾಲಿದೆ,” ಎಂದು ಎಚ್ಚರಿಸಿದರು.

ನಿಗಮ ಮಂಡಳಿಗಳಲ್ಲಿ ಎರಡೂವರೆ ವರ್ಷಗಳಿಂದ ಮುಂದುವರಿದಿರುವ ಅಧ್ಯಕ್ಷರು ಹಾಗೂ ಸದಸ್ಯರಿಂದ ರಾಜೀನಾಮೆ ಪಡೆದು, ಹೊಸ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಇದೇ ವೇಳೆ ಅವರು ನಾಯಕರಲ್ಲಿ ಮನವಿ ಮಾಡಿದರು.


“ನಮ್ಮ ಜಾತಿ ಕಾಂಗ್ರೆಸ್, ನಮ್ಮ ಪವಿತ್ರ ಧರ್ಮ ಸಂವಿಧಾನ. ದೇಶದಲ್ಲಿ ಯಾವುದೂ ಅಧಿಕೃತ ಧರ್ಮವಿಲ್ಲ. ಕುವೆಂಪು ಅವರು ಹೇಳಿದಂತೆ ನಾವು ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರಬಂದು ಬಹುತ್ವವನ್ನು ಉಳಿಸಲು ಹೋರಾಡಬೇಕಿದೆ.”

— ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ


‘ಸಾಕ್ಷಿ ಗುಡ್ಡೆ ಬಿಟ್ಟು ಹೋಗುತ್ತಿದ್ದೇನೆ’: ಸಿಎಂ ಡಿ.ಕೆ. ಶಿವಕುಮಾರ್

ತಮ್ಮ ಅಧ್ಯಕ್ಷೀಯ ಅವಧಿಯನ್ನು ನೆನೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾವು ಅಧಿಕಾರ ವಹಿಸಿಕೊಂಡಾಗ ಬಿಜೆಪಿ ಸರ್ಕಾರ ತಮಗೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಅವಕಾಶ ನೀಡಿರಲಿಲ್ಲ ಎಂದು ನೆನಪಿಸಿಕೊಂಡರು. “ನನ್ನ ಅವಧಿಯಲ್ಲಿ 75 ಲಕ್ಷ ಸದಸ್ಯತ್ವ ನೋಂದಣಿ, ಮೇಕೆದಾಟು ಪಾದಯಾತ್ರೆ ಹಾಗೂ ಪ್ರಜಾಧ್ವನಿ ಬಸ್ ಯಾತ್ರೆಗಳನ್ನು ಮಾಡಿದ್ದೇವೆ. ನೀವೆಲ್ಲ ಒಟ್ಟಾಗಿ ಹೋರಾಡಿದ್ದಕ್ಕೆ ಪಕ್ಷಕ್ಕೆ 138 ಸೀಟುಗಳು ಬಂದವು. ಇವತ್ತು ಹರಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸುವಾಗ ನಾನು ಸಾಕ್ಷಿ ಗುಡ್ಡೆ ಬಿಟ್ಟು ಹೋಗುತ್ತಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ,” ಎಂದರು.

ರಾಜ್ಯದ ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಚಿವರಿಗೆ ಸೂಚಿಸಿದ ಸಿಎಂ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 5 ಜನ ಕಾರ್ಯಕರ್ತರನ್ನು ಒಳಗೊಂಡ ‘ಗ್ಯಾರಂಟಿ ಸಮಿತಿ’ ರಚಿಸುವುದಾಗಿ ಪ್ರಕಟಿಸಿದರು. ಅಲ್ಲದೆ, ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

‘2028 ಹಾಗೂ 2029 ರಲ್ಲೂ ನಾವೇ ಅಧಿಕಾರಕ್ಕೆ’: ಮಾಜಿ ಸಿಎಂ ಸಿದ್ದರಾಮಯ್ಯ

ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಬಹುತ್ವವನ್ನು ಒಡೆಯುತ್ತಿರುವ ಬಿಜೆಪಿ ಮತ್ತು ಆರ್‌ ಎಸ್‌ ಎಸ್ ವಿರುದ್ಧ ಎಲ್ಲ ಕಾರ್ಯಕರ್ತರು ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

“ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ಯಶಸ್ವಿಯಾಗಿ ತಲುಪಿದ್ದು, ಜನರು ಖುಷಿಯಾಗಿದ್ದಾರೆ. ಇತ್ತೀಚಿನ 5 ಉಪಚುನಾವಣೆಗಳ ಗೆಲುವೇ ಇದಕ್ಕೆ ಸಾಕ್ಷಿ. ಕಳೆದ ಮೂರು ವರ್ಷಗಳ ನಮ್ಮ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದೆ,” ಎಂದು ಹೆಮ್ಮೆಯಿಂದ ಹೇಳಿದರು.

“ಬಿಜೆಪಿಯವರು ಸೋಶಿಯಲ್ ಮೀಡಿಯಾ ಮೂಲಕ ಸುಳ್ಳು ಹರಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದಕ್ಕೆ ನಮ್ಮ ಕಾರ್ಯಕರ್ತರು ಅವಕಾಶ ನೀಡಬಾರದು. 2028ರ ವಿಧಾನಸಭಾ ಚುನಾವಣೆಯಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಅಷ್ಟೇ ಅಲ್ಲದೆ, 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪವನ್ನು ನಾವಿಂದು ಮಾಡಬೇಕಿದೆ,” ಎಂದು ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಿವಿಮಾತಿನಂತೆ ಪರಸ್ಪರ ಕೈಜೋಡಿಸಿ, ಒಟ್ಟಾಗಿ ಮುನ್ನಡೆಯುವ ದೃಢ ಸಂಕಲ್ಪ ಮಾಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version