ಬಾಂಗ್ಲಾದೇಶದಲ್ಲಿ ಭೀಕರ ರೈಲು ಅಪಘಾತ: 20 ಸಾವು, ಹಲವರು ಮಂದಿಗೆ ಗಾಯ

ಢಾಕಾ: ಬಾಂಗ್ಲಾದೇಶದ ಈಶಾನ್ಯ ಕಿಶೋರ್ ಗಂಜ್ ಜಿಲ್ಲೆಯಲ್ಲಿ ಸರಕು ರೈಲೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 20 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಢಾಕಾದಿಂದ 60 ಕಿಲೋಮೀಟರ್ ದೂರದಲ್ಲಿರುವ ಕಿಶೋರ್ ಗಂಜ್ ಜಿಲ್ಲೆಯ ಭೈರಬ್ ಪ್ರದೇಶದಲ್ಲಿ ಢಾಕಾಗೆ ತೆರಳುತ್ತಿದ್ದ ಎಗರೋಸಿಂಧೂರ್ ಗೋಧುಲಿ ಎಕ್ಸ್ ಪ್ರೆಸ್ ಹಿಂಭಾಗದ ಬೋಗಿಗಳಿಗೆ ಚಟ್ಟೋಗ್ರಾಮ್ ಕಡೆಗೆ ತೆರಳುತ್ತಿದ್ದ ಸರಕು ರೈಲು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಭೈರಬ್ ರೈಲ್ವೆ ಪೊಲೀಸ್ ಠಾಣೆಯ ಕರ್ತವ್ಯ ಅಧಿಕಾರಿ ಸಿರಾಜುಲ್ ಇಸ್ಲಾಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈವರೆಗೆ 20 ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನಾವು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಕ್ಷಿಪ್ರ ಕ್ರಿಯಾ ಬೆಟಾಲಿಯನ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಮೂರು ಪ್ರಯಾಣಿಕರ ಬೋಗಿಗಳು ಪಲ್ಟಿಯಾಗಿವೆ. ಸುಮಾರು 100 ಪ್ರಯಾಣಿಕರನ್ನು ರಕ್ಷಿಸಿ ವಿವಿಧ ಆರೋಗ್ಯ ಕೇಂದ್ರಗಳಿಗೆ ಸಾಗಿಸಲಾಗಿದ್ದರೂ ಅನೇಕ ಜನರು ಶಿಥಿಲಗೊಂಡ ವ್ಯಾಗನ್ ಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಸ್ಥಳದಲ್ಲೇ ಅಗ್ನಿಶಾಮಕ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಶವಗಳನ್ನು ಮತ್ತು ಗಾಯಗೊಂಡ ಪ್ರಯಾಣಿಕರನ್ನು ಕಂಡುಹಿಡಿಯಲಾಗುತ್ತಿದೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.