ಗುಜರಿ ಹೆಕ್ಕುತ್ತಿದ್ದ ವ್ಯಕ್ತಿಯ ಕೈಗೆ ಕಡಿದು ಬರ್ಬರ ಹತ್ಯೆ
18/10/2023
ಉಡುಪಿ: ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿರುವ ಘಟನೆ ನಗರದ ಕರಾವಳಿ ಬೈಪಾಸ್ ಬಳಿ ನಡೆದಿದೆ.
ಮೃತರನ್ನು ಹುಬ್ಬಳ್ಳಿಯ ಸಿದ್ದಪ್ಪ ಶಿವಪ್ಪ (47) ಎಂದು ಗುರುತಿಸಲಾಗಿದೆ. ಸ್ಥಳೀಯವಾಗಿ ಗುಜರಿ ಹೆಕ್ಕುತ್ತಿದ್ದ ಇವರನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಹರಿತವಾದ ಆಯುಧದಿಂದ ಬಲ ಕೈಗೆ ಕಡಿದು ಪರಾರಿಯಾಗಿದ್ದು ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಂದು ಬೆಳಗ್ಗೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಉಡುಪಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ್ ಹಾಗೂ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಎಂಸಿ ಮಣಿಪಾಲ ಹಾಗೂ ಮಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯದವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

























