ಬೈಕ್ ಕಳವಿಗೆ ಯತ್ನ ಆರೋಪಿಸಿ ಮರಕ್ಕೆ ಕಟ್ಟಿ ಇಬ್ಬರಿಗೆ ಥಳಿತ: ಪರಸ್ಪರ ದೂರು ದಾಖಲು | ದಾರಿ ತಪ್ಪಿ ಬಂದ್ರಾ?

belthangady
23/01/2026

ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜನೆವರಿ 20ರ ತಡರಾತ್ರಿ ಬೈಕ್ ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ.

ಘಟನೆಯ ವಿವರ: ಜನೆವರಿ 20ರಂದು ತಡರಾತ್ರಿ ಸುಮಾರು 2:30ರ ಹೊತ್ತಿಗೆ ಕೂಳೂರು ನಿವಾಸಿಗಳಾದ ಮೊಯ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬುವವರು ಪಳಾರಗೋಳಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಜಯ ಪೂಜಾರಿ ಅವರ ಪತ್ನಿ, ಕೂಡಲೇ ನೇಮೋತ್ಸವ ಕಾರ್ಯಕ್ರಮದಲ್ಲಿದ್ದ ದೇವಿಪ್ರಸಾದ್ ಮತ್ತು ಇತರರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು, ಆರೋಪಿಗಳು ದೇವಿಪ್ರಸಾದ್ ಅವರ ಬೈಕ್ ಅನ್ನು ಕಳವು ಮಾಡಲು ಯತ್ನಿಸುತ್ತಿರುವುದನ್ನು ಕಂಡು ಬೆನ್ನಟ್ಟಿದ್ದಾರೆ. ಈ ವೇಳೆ ಸುಮಾರು 25 ರಿಂದ 30 ಜನರಿದ್ದ ಗುಂಪು ಆರೋಪಿಗಳನ್ನು ಹಿಡಿದು, ಮರಕ್ಕೆ ಕಟ್ಟಿ ಹಾಕಿ ಥಳಿಸಿದೆ. ಬಳಿಕ ಅವರನ್ನು ವೇಣೂರು ಪೊಲೀಸರಿಗೆ ಒಪ್ಪಿಸಲಾಗಿದೆ.

ಪರಸ್ಪರ ದೂರು ದಾಖಲು:

ಈ ಘಟನೆಗೆ ಸಂಬಂಧಿಸಿದಂತೆ ಈಗ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ, ಬೈಕ್ ಕಳವು ಮಾಡಲು ಯತ್ನಿಸಿದ ಆರೋಪದ ಮೇಲೆ ಮೊಯ್ದಿನ್ ನಾಸೀರ್ ಮತ್ತು ಅಬ್ದುಲ್ ಸಮದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಲ್ಲೆ ಪ್ರಕರಣ: ಇನ್ನೊಂದೆಡೆ, ತಾವು ಸಂಬಂಧಿಕರ ಮನೆ ಹುಡುಕುತ್ತಾ ದಾರಿ ತಪ್ಪಿ ಬಂದಿದ್ದೆವು ಎಂದು ಆರೋಪಿಸಿರುವ ಹಲ್ಲೆಗೊಳಗಾದವರು, ತಮ್ಮ ಮೇಲೆ ಗುಂಪು ಸೇರಿ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ. ಈ ದೂರಿನನ್ವಯ ಬಾಚು, ನಿತಿನ್, ನರೇಶ್ ಅಂಚನ್ ಸೇರಿದಂತೆ ಎಂಟು ಮಂದಿಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version