ಬೆಂಕಿಗೆ ಆಹುತಿ ಆಯ್ತು 4 ಗುಡಿಸಲುಗಳು | ನಾಲ್ಕು ಕುಟುಂಬಗಳು ಬೀದಿಗೆ

12/02/2021

ರಾಮನಗರ:  ನಾಲ್ಕು ಗುಡಿಸಲುಗಳು ಬೆಂಕಿಗೆ ಆಹುತಿಯಾದ ಘಟನೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದಿದ್ದು, ಇಲ್ಲಿ ವಾಸಿಸುತ್ತಿದ್ದ ಜನರು ಬೀದಿಪಾಲಾಗಿದ್ದಾರೆ.

ಇಲ್ಲಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಒಂದು ಗುಡಿಸಲಿಗೆ ಆಕಸ್ಮಿಕವಾಗಿ  ಬೆಂಕಿ ಬಿದ್ದಿದ್ದು, ಬೆಂಕಿಯ ಕೆನ್ನಾಲಿಗೆ ಚಾಚಿ ಮೂರು ಗುಡಿಸಲಿಗೂ ಬೆಂಕಿ ವ್ಯಾಪಿಸಿದೆ.

ಪರಿಣಾಮವಾಗಿ ಒಟ್ಟು ನಾಲ್ಕು ಗುಡಿಸಲುಗಳು ಭಸ್ಮವಾಗಿದೆ. ಅದೃಷ್ಟವಶಾತ್ ಗುಡಿಸಲಿನಲ್ಲಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ವಾಸಿಸಲು ಆಧಾರವಾಗಿದ್ದ ಗುಡಿಸಲು ಕಣ್ಣಮುಂದೆಯೇ ಭಸ್ಮವಾಗಿದ್ದನ್ನು ಕಂಡು ಇಲ್ಲಿನ ನಿವಾಸಿಗಳು ರೋದಿಸಿದ್ದು, ಹೃದಯವಿದ್ರಾವಕವಾಗಿ ಕಂಡು ಬಂತು.

ಗುಡಿಸಲಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಅಗ್ನಿಶಾಮಕ ದಳ ಬರುವಷ್ಟರಲ್ಲಿ ನಾಲ್ಕು ಗುಡಿಸಲುಗಳು ಭಸ್ಮವಾಗಿ ಹೋಗಿವೆ. ಬೆಂಕಿ ನಂದಿಸಲು ಇಲ್ಲಿನ ನಿವಾಸಿಗಳು ಎಲ್ಲ ಪ್ರಯತ್ನಗಳನ್ನು ನಡೆಸಿದರಾದರೂ, ಗುಡಿಸಲುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ವೆಂಕಟಲಕ್ಷ್ಮಮ್ಮ, ನಾಗರಾಜ್, ಮದ್ದೂರಮ್ಮ ಮತ್ತು ವೆಂಕಟೇಶ್ ಎಂಬವರಿಗೆ ಸೇರಿದ ಗುಡಿಸಲು ನಾಶವಾಗಿದ್ದು, ಇದೀಗ ಸೂರು ಇಲ್ಲದೇ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version