7:35 AM Thursday 23 - October 2025

ಮೈಮೇಲೆ ಚಿನ್ನಾಭರಣ ಹಾಕಿಕೊಂಡು ಬರ್ತಿದ್ದ ಗುತ್ತಿಗೆದಾರನ ಕೊಂದು ಚಿನ್ನದೋಚಿದ ಬಿಹಾರ ಮೂಲದ ಕಾರ್ಮಿಕರು

hassana
31/05/2025

ಹಾಸನ: ಮೈಮೇಲೆ ದುಬಾರಿ ಚಿನ್ನಾಭರಣಗಳನ್ನು ಹಾಕಿಕೊಂಡು ಬರುತ್ತಿದ್ದ ಗುತ್ತಿಗೆದಾರನ ಮೇಲೆ ಕಣ್ಣಿಟ್ಟಿದ್ದ ಬಿಹಾರ ಮೂಲದ ಇಬ್ಬರು ಕಾರ್ಮಿಕರು, ಗುತ್ತಿಗೆದಾರನನ್ನು ಬರ್ಬರವಾಗಿ ಹತ್ಯೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ  ಹಾಸನದ ಅರಸೀಕೆರೆ ಪಟ್ಟಣದ KSRTC ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ವಿಜಯಕುಮಾರ್ (46)  ಹತ್ಯೆಗೀಡಾದ ಗುತ್ತಿಗೆದಾರನಾಗಿದ್ದಾನೆ. ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಕೊಲೆ ಮಾಡಿರುವ ಆರೋಪಿಗಳು ಎಂದು ತಿಳಿದು ಬಂದಿದೆ.  ಅರಸೀಕೆರೆ ಪಟ್ಟಣದ ವಿಜಯಕುಮಾರ್, ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆಎಸ್‌ ಆರ್‌ ಟಿಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ವಿಕ್ರಂ ಹಾಗೂ ಸಚಿನ್‌ನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ವಿಕ್ರಂ ಹಾಗೂ ಸಚಿನ್, ವಿಜಯ್‌ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿಜಯ್ ಕುಮಾರ್ ತಮ್ಮ ಕೊರಳಿನಲ್ಲಿ ದಪ್ಪವಾದ ಚಿನ್ನದ ಸರ, ನಾಲ್ಕೈದು ಚಿನ್ನದ ಉಂಗೂರಗಳನ್ನು ಧರಿಸಿಕೊಂಡು ಬರುತ್ತಿದ್ದರು. ಹೀಗಾಗಿ ಚಿನ್ನ ದೋಚಲು ವಿಕ್ರಂ ಹಾಗೂ ಸಚಿನ್ ಪ್ಲಾನ್ ಮಾಡಿದ್ದರು.

ಶುಕ್ರವಾರ ರಾತ್ರಿ  ವಿಜಯ್ ಕುಮಾರ್ ಅವರಿಗೆ ಕರೆ ಮಾಡಿದ್ದ ವಿಕ್ರಂ ಹಾಗೂ ಸಚಿನ್ ನಮಗೆ ಹುಷಾರಿಲ್ಲ, ನಮ್ಮನ್ನು ಹೊರಗೆ ಕರೆದುಕೊಂಡು ಹೋಗಿ, ನಾವೇ ಹೋದರೆ ನಮ್ಮ ಮೇಲೆ ಅನುಮಾನ ಪಡುತ್ತಿದ್ದಾರೆ ಎಂಬ ನೆಪ ಇಟ್ಟಿದ್ದಾರೆ. ವಿಜಯ್ ಕುಮಾರ್ ಕಟ್ಟಡ ಮಾಲಿಕ ಶ್ರೀನಿವಾಸ್ ಗೆ ಕರೆ ಮಾಡಿ ವಿಚಾರ ತಿಳಿಸಿದಾಗ  ನಾಳೆ ನೋಡೋಣ ಬಿಡು ಎಂದಿದ್ದರು. ಆದರೆ, ಏನಾದ್ರು ಹೆಚ್ಚುಕಮ್ಮಿ ಆದ್ರೆ ನನ್ನ ತಲೆಗೆ ಬರುತ್ತದೆ ಎಂದು ವಿಜಯ್ ಕುಮಾರ್ ಸ್ಥಳಕ್ಕೆ ಸ್ಕೂಟಿ ಮೂಲಕ ಹೋಗಿದ್ದರು.

ಕಾರ್ಮಿಕರು  ತಂಗಿದ್ದ ನಿರ್ಮಾಣ ಹಂತದ ಕಟ್ಟಡದ ಒಳಗೆ ಹೋಗುತ್ತಿದ್ದಂತೆಯೇ ಕಬ್ಬಿಣದ ರಾಡ್ ನಿಂದ ತಲೆಗೆ ಒಡೆದು, ಗ್ಯಾಸ್ ಸಿಲಿಂಡರ್ ನಿಂದ ಮುಖ ಜಜ್ಜಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದು, ಬಳಿಕ ಚಿನ್ನದ ಚೈನ್, ಮೂರು ಉಂಗೂರ ಕಸಿದು ಕೊಂಡಿದ್ದಾರೆ. ಒಂದು ಉಂಗೂರ ಬೆರಳಿನಿಂದ ಬಾರದ ಕಾರಣ ಬೆರಳನ್ನೇ ಕತ್ತರಿಸಿ ತೆಗೆದುಕೊಂಡು ಕೊಂಡು ಹೋಗಿದ್ದಾರೆ. ಆರೋಪಿಗಳು ತಪ್ಪಿಸಿಕೊಂಡು ಸ್ಕೂಟಿಯಲ್ಲಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಸೀಕೆರೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version