10:49 PM Wednesday 5 - November 2025

ಓಟು ಕೇಳಲು ಬಂದ ಶಾಸಕನಿಗೆ ಏಟು: ಐದು ವರ್ಷದ ಬಳಿಕ ಓಟು ಕೇಳಲು ಬಂದಿದ್ದ ಶಾಸಕ!

bihar election
05/11/2025

ಪಾಟ್ನಾ:  ಬಿಹಾರ ಚುನಾವಣೆ( Bihar Election) ಪ್ರಚಾರದ ವೇಳೆ ಓಟು ಕೇಳಲು ಬಂದ ಹಾಲಿ ಶಾಸಕರೊಬ್ಬರಿಗೆ ಗ್ರಾಮಸ್ಥರು ಏಟು ನೀಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದ್ದು, ಶಾಸಕರ ಆಪ್ತರಿಗೂ ಏಟು ಬಿದ್ದಿದೆ.

ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಶಾಸಕ ಅನಿಲ್ ಕುಮಾರ್ ಹಾಗೂ ಅವರ ಬೆಂಬಲಿಗರ ಮೇಲೆ ಅವರದ್ದೇ ಕ್ಷೇತ್ರದ ಗ್ರಾಮಸ್ಥರು ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಿದ್ದಾರೆ.

ಕಳೆದ ಚುನಾವಣೆಯ ನಂತರ ಐದು ವರ್ಷ ಕಳೆದ ನಂತರ ಈ ವರ್ಷದ ಚುನಾವಣೆ ವೇಳೆಯೇ ಶಾಸಕರು ದಿಘೋರಾ ಗ್ರಾಮಕ್ಕೆ ಭೇಟಿ ನೀಡಿದ್ದರು.  ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ ಗ್ರಾಮದತ್ತ ತಿರುಗಿ ನೋಡದೇ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ  ನಿರ್ಲಕ್ಷ್ಯ ವಹಿಸಿದ್ದ ಶಾಸಕರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದರು.

ಟಿಕ್ಕರಿ ವಿಧಾನಸಭಾ ಸ್ಥಾನಕ್ಕಾಗಿ ಪ್ರಚಾರ ಆಗಮಿಸಿದ್ದ ಶಾಸಕ ಅನಿಲ್ ಕುಮಾರ್  ದಿಘೋರಾ ಗ್ರಾಮದಲ್ಲಿ ಕಾರಿನ ಮೇಲೆ ನಿಂತು ಮತದಾರರತ್ತ ಕೈ ಬೀಸಿದ್ದಾರೆ. ಆದರೆ ಮತದಾರರು ಕಲ್ಲು ಬೀಸಿದ್ದಾರೆ. ಶಾಸಕರ ಕಾರು ಹಾಗೂ ಬೆಂಬಲಿಗರ ಮೇಲೆ ಕೈ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ.

ಸ್ಥಳೀಯ ಗ್ರಾಮಸ್ಥರು ವರ್ಷಗಳಿಂದಲೂ ಉತ್ತಮ ರಸ್ತೆಗಾಗಿ ಬೇಡಿಕೆ ಇಡುತ್ತಾ ಬಂದಿದ್ದಾರೆ. ಆದರೆ ಎಷ್ಟೇ ಬೇಡಿಕೆ ಸಲ್ಲಿಸಿದರೂ ರಸ್ತೆ ಕಾಮಗಾರಿ ನಡೆದಿಲ್ಲ. ರಸ್ತೆಯನ್ನು ನಿರ್ಮಿಸದ ಕಾರಣ ಕೋಪಗೊಂಡ ಗ್ರಾಮಸ್ಥರು ಶಾಸಕರ ಮೇಲೆ ಹಲ್ಲೆ ನಡೆಸಿ ವಾಹನವನ್ನು ಕಲ್ಲು ಮತ್ತು ಇಟ್ಟಿಗೆಗಳಿಂದ ಹಲ್ಲೆ ಮಾಡುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅನಿಲ್ ಕುಮಾರ್ ಮಾತ್ರವಲ್ಲದೇ ಅವರ ಕೆಲವು ಬೆಂಬಲಿಗರ ಮೇಲೂ ಹಲ್ಲೆಯಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version