ಬಿಟ್‌ ಕಾಯಿನ್ ಪ್ರಕರಣ: ಶಾಸಕ ಎನ್.ಎ. ಹ್ಯಾರಿಸ್ ಇಬ್ಬರು ಪುತ್ರರಿಗೆ ಇಡಿ ಸಮನ್ಸ್

nalapad
10/06/2026

ಬೆಂಗಳೂರು: ಬಹುಕೋಟಿ ಕ್ರಿಪ್ಟೋ ಕರೆನ್ಸಿ (ಬಿಟ್‌ ಕಾಯಿನ್) ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಂತಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಇಬ್ಬರು ಪುತ್ರರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಇಡಿ ಅಧಿಕಾರಿಗಳು ಮಂಗಳವಾರ ಸಮನ್ಸ್ ಜಾರಿ ಮಾಡಿದ್ದಾರೆ.

ಶಾಸಕರ ಪುತ್ರರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಾಗೂ ಒಮರ್ ಫಾರೂಕ್ ನಲಪಾಡ್ ಅವರಿಗೆ ಸಮನ್ಸ್ ನೀಡಲಾಗಿದ್ದು, ಜೂನ್ 11 ರಂದು ಕೇಂದ್ರ ತನಿಖಾ ಸಂಸ್ಥೆಯ (ಇಡಿ) ಕಚೇರಿಯ ಮುಂದೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಬ್ಬರ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಳ್ಳಲಿದ್ದಾರೆ.

2017ರ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಶೇಷ ತನಿಖಾ ದಳ (SIT) ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿತ್ತು. ಈ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ. ಹಗರಣದ ಮುಖ್ಯ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ನಗದೀಕರಣಕ್ಕಾಗಿ ನಲಪಾಡ್‌ನನ್ನು ಸಂಪರ್ಕಿಸಿದ್ದ ಎನ್ನಲಾಗಿದ್ದು, ನಲಪಾಡ್ ತನ್ನ ಸ್ನೇಹಿತರ ಮೂಲಕ ಹಣವನ್ನು ನಗದೀಕರಣ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಿಂದೆಯೂ ನಡೆದಿತ್ತು ಇಡಿ ದಾಳಿ:

ಕಳೆದ ಏಪ್ರಿಲ್ ತಿಂಗಳಿನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಮತ್ತು ಇತರರ ನಿವಾಸಗಳ ಮೇಲೆ ದಾಳಿ ನಡೆಸಿ ಸುದೀರ್ಘ ಶೋಧ ನಡೆಸಿದ್ದರು. ಈ ದಾಳಿಯ ಬಳಿಕ ಮಾತನಾಡಿದ್ದ ಕರ್ನಾಟಕ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್, “ನನ್ನ ಮತ್ತು ನನ್ನ ಸಹೋದರನ ಮನೆಯಲ್ಲಿ ಇಡಿ ಅಧಿಕಾರಿಗಳು 21 ಗಂಟೆಗಳ ಕಾಲ ತಪಾಸಣೆ ನಡೆಸಿದರೂ ಅವರಿಗೆ ಏನೂ ಸಿಕ್ಕಿಲ್ಲ. ಇದೆಲ್ಲವೂ ರಾಜಕೀಯ ಸೇಡಿನ ಕ್ರಮ,” ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದರು.

ಆದರೆ, ಇದೀಗ ಇಡಿ ಜೂನ್ 11ಕ್ಕೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದರಿಂದ ನಲಪಾಡ್ ಸಹೋದರರಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version