1:14 AM Saturday 21 - February 2026

ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದ ಬಿಜೆಪಿಗೆ ಮುಜುಗರ: ಬಿಜೆಪಿ ಶಾಸಕನೇ ಲೋಕಾಯುಕ್ತರ ಬಲೆಗೆ!

chandru lamani
21/02/2026

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದ ಬಿಜೆಪಿಗೆ ತೀವ್ರ ಮುಜುಗರದ ಸನ್ನಿವೇಶವೊಂದು ಸೃಷ್ಟಿಯಾಗಿದೆ.  ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದು ರಾಜ್ಯ ಬಿಜೆಪಿಗೆ ತೀವ್ರ ಮುಖಭಂಗ ಸೃಷ್ಟಿಸಿದೆ.

ಆರೋಪ—ಪ್ರತ್ಯಾರೋಪಗಳು:

ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರದ ಆರೋಪ–ಪ್ರತ್ಯಾರೋಪಗಳು ಜೋರಾಗಿತ್ತು. ಇದರ ನಡುವೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸರ್ಕಾರಗಳು ಬದಲಾವಣೆಯಾದರೂ ಭ್ರಷ್ಟಾಚಾರ ಅನ್ನೋದು ಹಾಗೆಯೇ ಇರುತ್ತದೆ.  ಭ್ರಷ್ಟಾಚಾರ ಹಿಂದೆಯೂ ಇತ್ತು ಇಂದೂ ಇದೆ ಎಂದು ಹೇಳಿದ್ದರು.  ಈ ಹೇಳಿಕೆ ವಿಪಕ್ಷಗಳಿಗೆ ಆಹಾರವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸರ್ಕಾರದ ಆಡಳಿತದಲ್ಲಿ ‘ಕಮಿಷನ್ ಸಂಸ್ಕೃತಿ’ ಇರುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿರುವುದು ಕಾಂಗ್ರೆಸ್ ಸರ್ಕಾರದೊಳಗಿನ ಭ್ರಷ್ಟಾಚಾರವನ್ನು ಬಯಲಿಗೆ ತಂದಿದೆ, ಕಾಂಗ್ರೆಸ್ ತನ್ನ ‘ಪಂಚ ಗ್ಯಾರಂಟಿ’ಯನ್ನು ಜೋರಾಗಿ ಪ್ರಚಾರ ಮಾಡುತ್ತಿದೆ. ಆದರೆ ಜನರಿಗೆ ಸಿಗುತ್ತಿರುವ ಏಕೈಕ ಗ್ಯಾರಂಟಿ ‘ಲಂಚ ಗ್ಯಾರಂಟಿ’ ಮಾತ್ರ, ಕಾಂಗ್ರೆಸ್ ಇತಿಹಾಸದಿಂದಲೇ ಭ್ರಷ್ಟಾಚಾರಕ್ಕೆ ಹೆಸರಾಗಿದ್ದು, ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳು ಜನರಲ್ಲಿ ಇರುವ ಗಂಭೀರ ಆತಂಕಗಳಿಗೆ ಮತ್ತಷ್ಟು ಸ್ಪಷ್ಟನೆ ನೀಡಿದೆ ಅಂತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ:

ಅತ್ತ ಭ್ರಷ್ಟಾಚಾರದ ಬಿಸಿ ಬಿಸಿ ಆರೋಪ ಪ್ರತ್ಯಾರೋಪಗಳ ನಡುವೆಯೇ  ಇತ್ತ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ ಕಮಿಷನ್ ರೂಪದಲ್ಲಿ ಲಂಚ ಪಡೆಯುತ್ತಿದ್ದಾಗ ಶಾಸಕರು ಮತ್ತು ಅವರ ಸಹಚರರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಚಿಂಚಲಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ವಿಜಯರಾಜ ಎಸ್. ಪೂಜಾರ ಅವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಲಕ್ಷ್ಮೀಶ್ವರ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳ ಟೆಂಡರ್ ಅನ್ನು ಪೂಜಾರ ಅವರು ಪಡೆದಿದ್ದರು.

ಗುತ್ತಿಗೆದಾರ ಪೂಜಾರ ಅವರು ನೀಡಿದ ದೂರಿನ ಪ್ರಕಾರ,  ಕಾಮಗಾರಿ ಆರಂಭಿಸಲು ಶಾಸಕ ಚಂದ್ರು ಲಮಾಣಿ ಅಡ್ಡಿಪಡಿಸುತ್ತಿದ್ದರು. ಶಾಸಕರು, ಅವರ ಪಿಎ ಮಂಜುನಾಥ್ ವಾಲ್ಮೀಕಿ ಮತ್ತು ಸಂಬಂಧಿ ಗುರು ಲಮಾಣಿ ಸೇರಿ ಒಟ್ಟು 12% ಕಮಿಷನ್ (11 ಲಕ್ಷ ರೂ.) ಹಣಕ್ಕೆ ಬೇಡಿಕೆಯಿಟ್ಟಿದ್ದರು. “ನಮಗೆ ತಿಳಿಸದೆ ಕೆಲಸ ಮಾಡಿದರೆ ಟೆಂಡರ್ ರದ್ದು ಮಾಡಿಸುತ್ತೇವೆ, ರೌಡಿಗಳನ್ನು ಕಳುಹಿಸಿ ಬುದ್ಧಿ ಕಲಿಸುತ್ತೇವೆ” ಎಂದು ಶಾಸಕರು ಧಮ್ಕಿ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಲೋಕಾಯುಕ್ತ ಕಾರ್ಯಾಚರಣೆ:

ಫೆಬ್ರವರಿ 18ರಂದು ಗುತ್ತಿಗೆದಾರ ಪೂಜಾರ ಅವರು ಗದಗ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಶನಿವಾರ ಮಧ್ಯಾಹ್ನ ಶಾಸಕರು ಮೊದಲ ಕಂತಿನ ರೂಪದಲ್ಲಿ 5 ಲಕ್ಷ ರೂ. ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಧಾರವಾಡ ಮತ್ತು ಗದಗ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಸದ್ಯ ಶಾಸಕರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಈ ಬೆಳವಣಿಗೆಯು ಬಿಜೆಪಿಗೆ ಮುಜುಗರ ತಂದಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version