ರಂಗೇರಿದ ಮಧ್ಯಪ್ರದೇಶ ಚುನಾವಣಾ ಕಣ: ಬಿಜೆಪಿ ಗೆದ್ರೆ ಉಚಿತ ಆಯೋಧ್ಯೆ ದರ್ಶನ ಎಂದ ರಾಜನಾಥ್ ಸಿಂಗ್

15/11/2023

ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಅಯೋಧ್ಯೆ ದರ್ಶನ ವ್ಯವಸ್ಥೆ ಮಾಡುವುದಾಗಿ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.

ರತ್ಲಾಂ ಜಿಲ್ಲೆಯ ಜವೋರಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಬಿಜೆಪಿ ಪಕ್ಷ 1980ರಲ್ಲಿ ಒಂದು ಶಪಥ ಮಾಡಿತ್ತು. ಅಧಿಕಾರಕ್ಕೆ ಬಂದ ಮೇಲೆ ರಾಮ ಮಂದಿರ ಕಟ್ಟಿಸುತ್ತೇವೆ ಎಂದು ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಯಾಗಿದೆ. ನಿಮ್ಮನ್ನ ಜನವರಿ 22, 2024ರಂದು ನಡೆಯಲಿರುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇನೆ ಎಂದರು.

ಇನ್ನು ಬಿಜೆಪಿ ಪಕ್ಷವು ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಯಾವುದೇ ಧರ್ಮ ಬೇಧವಿಲ್ಲದೇ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಅಯೋಧ್ಯೆ ದರ್ಶನ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ದೇಶದಲ್ಲಿ ಒಂದು ಧರ್ಮದ ಸಹೋದರಿಯರಿಗೆ ಅವರ ಪತಿ ಮೂರು ಬಾರಿ ತಲಾಕ್‌ ಹೇಳಿ ಮದುವೆ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದರು. ನಾವು ಮತದ ಬಗ್ಗೆ ಯೋಚಿಸದೇ ತ್ವರಿತ ತಲಾಕ್‌ ನೀಡುವ ಪದ್ದತಿ ವಿರುದ್ಧ ಕಾನೂನು ತಂದು ಸಹೋದರಿಯರನ್ನು ರಕ್ಷಿಸಿದ್ದೇವೆ ಎಂದರು.

ಕಾಂಗ್ರೆಸ್‌ ಗರೀಭಿ ಹಠಾವೋ ಘೋಷವಾಕ್ಯವನ್ನು ತಂದಿತು. ಆದರೆ 50-55 ವರ್ಷ ಅಧಿಕಾರದಲ್ಲಿದ್ದರೂ ಅವರಿಂದ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿದೆ. ಬಹಳಷ್ಟು ವಲಯದಲ್ಲಿರುವ ಭ್ರಷ್ಟಾಚಾರವನ್ನು ಅಳಿಸಿಹಾಕಲಾಗಿದೆ ಎಂದರು.

ಇತ್ತೀಚಿನ ಸುದ್ದಿ

Exit mobile version