ಮಹಿಳೆ ಮೇಲೆ ಬಸ್ಸಿನಲ್ಲೇ ಭೀಕರವಾಗಿ ದಾಳಿ ಮಾಡಿದ ಬಿಎಂಟಿಸಿ ಕಂಡೆಕ್ಟರ್!: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

bmtc
26/03/2024

ಬೆಂಗಳೂರು: ಕಂಡೆಕ್ಟರ್  ಹಾಗೂ ಮಹಿಳೆ ನಡುವೆ ಏರು ಧ್ವನಿಯಲ್ಲಿ ಜಗಳ ನಡೆದಿದ್ದು, ಈ ವೇಳೆ ಕಂಡೆಕ್ಟರ್ ಗೆ ಮಹಿಳೆ ಕಪಾಳ ಮೋಕ್ಷ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಕಂಡೆಕ್ಟರ್ ಮಹಿಳೆ ಎಂದೂ ನೋಡದೇ ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ಬಿಎಂಟಿಸಿ ಬಸ್ ನಲ್ಲಿ ನಡೆದಿದೆ.

ಕಂಡೆಕ್ಟರ್ ಹಾಗೂ ಮಹಿಳೆಯ ನಡುವೆ ನಡೆದ ಮಾರಾಮಾರಿಯ ದೃಶ್ಯ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಕಂಡು ಬಂದಂತೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಕಂಡೆಕ್ಟರ್ ನಡುವೆ ಜಗಳ ನಡೆದಿದೆ. ಬಸ್ಸಿನ ನಿರ್ವಾಹಕನಾಗಿ ಪ್ರಯಾಣಿಕ ಮಹಿಳೆಯನ್ನು ಸಮಾಧಾನ ಮಾಡಬೇಕಿದ್ದ ಕಂಡೆಕ್ಟರ್ ಮಹಿಳೆಯ ಜೊತೆಗೆ ಜಗಳಕ್ಕೆ ಇಳಿದಿದ್ದು, ಜಗಳ ವಿಕೋಪಕ್ಕೆ ತಿರುಗಲು ಕಾರಣವಾಗಿದೆ. ಒಂದು ಹಂತದಲ್ಲಿ ಕಂಡೆಕ್ಟರ್ ನ ಏರುಧ್ವನಿಯ ಅವಾಜ್ ನಿಂದ ಕೋಪಗೊಂಡ ಮಹಿಳೆ ಕಂಡೆಕ್ಟರ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಈ ವೇಳೆ ರೊಚ್ಚಿಗೆದ್ದ ಕಂಡೆಕ್ಟರ್ ಮಹಿಳೆಯ ಕಪಾಳಕ್ಕೆ ಬಲವಾಗಿ ಹಲ್ಲೆ ಮಾಡಿರೋದೇ ಅಲ್ಲದೇ ಮಹಿಳೆಯ ಮೈಮುಟ್ಟಿ ಬೆನ್ನು ಇನ್ನಿತರ ಭಾಗಗಳಿಗೆ ಹಿಗ್ಗಾ ಮುಗ್ಗಾ ಥಳಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ತನ್ಜಿಲಾ ಇಸ್ಮಾಯಿಲ್ ಎಂದು ಗುರುತಿಸಲಾಗಿದ್ದು, ಹಲ್ಲೆ ನಡೆಸಿದ ಕಂಡೆಕ್ಟರ್  ಹೊನ್ನಪ್ಪ ಎಂದು ತಿಳಿದು ಬಂದಿದೆ.

ಮಹಿಳೆ ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಹೊರಟಿದ್ದರು. ಕಂಡೆಕ್ಟರ್ ಮಹಿಳೆಗೆ ಟಿಕೆಟ್ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಕ್ಕೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಮಹಿಳೆ ಮೊದಲು ಕಪಾಳಮೋಕ್ಷ ಮಾಡಿದ್ದು, ಕಂಡೆಕ್ಟರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ತಾಳ್ಮೆ ಪ್ರದರ್ಶಿಸದೇ ಮಹಿಳೆ ಮೇಲೆ  ಪ್ರತಿದಾಳಿ ನಡೆಸಿದ್ದಾನೆ.

ಸದ್ಯ ಆರೋಪಿಯನ್ನು ಕರ್ತವ್ಯದಲ್ಲಿದ್ದಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version