ಮರಣ ದೃಢೀಕರಣಕ್ಕೂ ಲಂಚ: ಪಿಡಿಓ ಲೋಕಾಯುಕ್ತ ಬಲೆಗೆ

ಮರಣ ದೃಢೀಕರಣಕ್ಕಾಗಿ ಲಂಚದ ಪಡೆಯುತ್ತಿದ್ದ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಪಿಡಿಓರನ್ಮು ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಮರಣ ದೃಢೀಕರಣ ಪತ್ರಕ್ಕಾಗಿ ದೂರುದಾರರಿಂದ 13,000 ರೂಪಾಯಿ ಲಂಚ ಪಡೆದ ಆರೋಪದಲ್ಲಿ ಚೇಳ್ಯಾರು ಗ್ರಾಮದ ಪಿಡಿಒ ವಿಜಿತ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ತಿಳಿಸಿದ್ದಾರೆ.
ದೂರುದಾರರು ತನ್ನ ತಾಯಿಯ ಹೆಸರಿನಲ್ಲಿ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ 42 ಸೆಂಟ್ಸ್ ಜಮೀನಿನಲ್ಲಿ 5 ಸೆಂಟ್ಸ್ ಜಮೀನನ್ನು ಮಾರಾಟಕ್ಕೆ ತೀರ್ಮಾನಿಸಿದ್ದರು. ಈ ಬಗ್ಗೆ ದಾಖಲಾತಿಗಾಗಿ ಅಜ್ಜನ ಮರಣ ಪ್ರಮಾಣ ಪತ್ರ ಹಾಗೂ ಸಂತತಿ ನಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಿಳಿಸಲಾಗಿತ್ತು.
ಸೆಪ್ಟಂಬರ್ ನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಅಜ್ಜನ ಮರಣದ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ದೂರುದಾರರು ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನ. 20ರಂದು ಗ್ರಾಮ ಆಡಳಿತ ಅಧಿಕಾರಿಯ ಮೊಬೈಲ್ ನಂಬರಿಗೆ ಕರೆ ಮಾಡಿ ಮಾತನಾಡಿದಾಗ ದೃಢೀಕರಣ ಪತ್ರ ಸಿದ್ಧವಿದೆ. 15,000 ರೂ. ತರುವಂತೆ ತಿಳಿಸಿದ್ದರು. ಆದರೆ ತನ್ನಲ್ಲಿ ಅಷ್ಟು ಹಣ ಇಲ್ಲ ಎಂದಾಗ ನಾಳೆ ಕೊಡಿ ಎಂದು ತಿಳಿಸಿದ್ದರು.
ನ. 22ರಂದು ದೂರುದಾರರು ಚೇಳ್ಯಾರು ಗ್ರಾಮ ಕರಣಿಕರ ಕಚೇರಿಗೆ ಹೋಗಿ ಪಿಡಿಒ ಬಳಿ ಮಾತನಾಡಿದಾಗ, ಮರಣ ದೃಢೀಕರಣ ಪತ್ರ ನೀಡಲು 15,000 ರೂ. ನಾಡಕಚೇರಿಗೆ ಬಂದು ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ತಮ್ಮಲ್ಲಿ ಸ್ವಲ್ಪ ಹಣ ಕಡಿಮೆ ಎಂದಾಗ ಎರಡು ಸಾವಿರ ಕಮ್ಮಿ ಮಾಡಿ ಕೊಡಿ ಎಂದು ಹೇಳಿದ್ದರು.
ಅದರಂತೆ ದೂರುದಾರರಿಂದ ಪಿಡಿಒ ವಿಜಿತ್ ರವರು 13,000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.