6:17 AM Saturday 31 - January 2026

ದಟ್ಟಕಾಡಿನಲ್ಲಿ ಬುಡಕಟ್ಟು ಸಮುದಾಯದ ಬಾಲಕಿಯ ಅತ್ಯಾಚಾರ | ಸಂತ್ರಸ್ತೆಯ ತಂದೆ, 4 ವರ್ಷದ ಮಗುವಿನ ಬರ್ಬರ ಹತ್ಯೆ

04/02/2021

ಛತ್ತೀಸ್ ಗಢ: ಬುಡಕಟ್ಟು ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ತಂದೆ ಹಾಗೂ 4 ವರ್ಷದ ಮಗುವನ್ನು ಹತ್ಯೆ ಮಾಡಿದ ಘೋರ ಘಟನೆ  ಲೆಮ್ರು ಪೊಲೀಸ್ ಠಾಣೆ ವ್ಯಾಪ್ತಿಯ ಗಧುಪ್ರೋದಾ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಜನವರಿ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸಂತರಾಮ್ ಮುಜಾವರ್ (45) ಎಂಬಾತನ ಮನೆಯಲ್ಲಿ ಸಂತ್ರಸ್ತರ ಕುಟುಂಬ  ಜಾನುವಾರು ಮೇಯಿಸುವ ಕೆಲಸ ಮಾಡುತ್ತಿತ್ತು.

ಜನವರಿ 29ರಂದು ಆರೋಪಿ ಮುಜಾವರ್ ತನ್ನ ಬೈಕ್ ನಲ್ಲಿ ಸಂತ್ರಸ್ತರ ಬರ್‌ ಪಾನಿ ಗ್ರಾಮಕ್ಕೆ ಅವರನ್ನು ಬಿಟ್ಟು ಬರಲು ತೆರಳಿದ್ದ. ದಾರಿ ಮಧ್ಯೆ ಸಿಗುವ ಕೊರಾಯ್ ಎಂಬ ಗ್ರಾಮದಲ್ಲಿ ಬೈಕ್ ನಿಲ್ಲಿಸಿ ಮದ್ಯ ಸೇವಿಸಿದ್ದ. ಬಳಿಕ ಇತರ ಆರೋಪಿಗಳನ್ನು ಸೇರಿಸಿಕೊಂಡು, ದಟ್ಟ ಕಾಡಿನ ಮಧ್ಯೆ ಬೆಟ್ಟದ ತಪ್ಪಲಿಗೆ ಕರೆದೊಯ್ದು, ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಬಳಿಕ 4 ವರ್ಷದ ಮಗು ಹಾಗೂ ಬಾಲಕಿಯ ತಂದೆ ಸೇರಿದಂತೆ ಯುವತಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಗೈದು ಕಾಡಿನಲ್ಲಿ ಎಸೆಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕೋರ್ಬಾ ಎಸ್ಪಿ ಅಭಿಷೇಕ್ ಮೀನಾ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version