ಸಿ.ಜೆ.ರಾಯ್ ಸಾವಿಗೂ ಮುನ್ನ ನಡೆದ 3 ಘಟನೆಗಳೇನು?: ಗಾಬರಿಯಿಂದ ಕಚೇರಿಗೆ ಬಂದಿದ್ದ ಸಿ.ಜೆ.ರಾಯ್

cj roy
30/01/2026

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಮತ್ತು ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಅನಿರೀಕ್ಷಿತ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ರಾಯ್ ಅವರ ಸಾವಿನ ಹಿಂದೆ ಹಲವು ಅನುಮಾನಗಳಿವೆ ಎಂದು ಕಾನ್ಫಿಡೆಂಟ್ ಗ್ರೂಪ್‌ ನ ನಿರ್ದೇಶಕ ಟಿ.ಜೆ. ಜೋಸೆಫ್ ಅವರು ಪೊಲೀಸರಿಗೆ ದೂರು ನೀಡಿದ್ದು, ಸಾವಿಗೂ ಕೆಲವೇ ಕ್ಷಣಗಳ ಮುನ್ನ ನಡೆದ ಮೂರು ಪ್ರಮುಖ ಘಟನೆಗಳ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಏನಿದು 3 ಅನುಮಾನಾಸ್ಪದ ಘಟನೆಗಳು?

ಗಾಬರಿಯಿಂದ ಕಚೇರಿಗೆ ಬಂದಿದ್ದ ರಾಯ್: ಸಿಜೆ ರಾಯ್ ಅವರು ಯಾವಾಗಲೂ ಶಾಂತ ಸ್ವಭಾವದ ವ್ಯಕ್ತಿ. ಎಂತಹ ಸವಾಲುಗಳನ್ನೂ ಹಸನ್ಮುಖಿಯಾಗಿಯೇ ಎದುರಿಸುತ್ತಿದ್ದರು. ಆದರೆ, ಘಟನೆ ನಡೆದ ದಿನ (ಜ.30) ಮಧ್ಯಾಹ್ನ ಅವರು ಕಚೇರಿಗೆ ಬಂದಾಗ ತೀವ್ರ ಆತಂಕ ಮತ್ತು ಗಾಬರಿಯಲ್ಲಿದ್ದರು. ಸಾಮಾನ್ಯವಾಗಿ ಲಿಫ್ಟ್ ಬಳಸುತ್ತಿದ್ದ ಅವರು ಅಂದು ಮೆಟ್ಟಿಲುಗಳ ಮೂಲಕವೇ ಓಡಿ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗನ್‌ ಮ್ಯಾನ್ ತಡೆದಿದ್ದೇಕೆ?: ರಾಯ್ ಅವರು ಎಲ್ಲೇ ಹೋದರೂ ಅವರ ಗನ್‌ಮ್ಯಾನ್ ಸದಾ ಜೊತೆಗಿರುತ್ತಿದ್ದರು. ಆದರೆ ಅಂದು ಕಚೇರಿಗೆ ಬಂದ ತಕ್ಷಣ ಗನ್‌ ಮ್ಯಾನ್‌ ನನ್ನು ಹೊರಗಡೆ ನಿಲ್ಲುವಂತೆ ಸೂಚಿಸಿ, “ಯಾರನ್ನೂ ಒಳಗೆ ಬಿಡಬೇಡ” ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಇದು ಸಿಬ್ಬಂದಿಗಳಲ್ಲಿ ಅಚ್ಚರಿ ಮೂಡಿಸಿತ್ತು.

ಕೊಠಡಿ ಲಾಕ್ ಮಾಡಿ ಏಕಾಂತ: ಕಚೇರಿ ಒಳಗೆ ಹೋದ ಕೂಡಲೇ ರಾಯ್ ತಮ್ಮ ಕೊಠಡಿಯ ಬಾಗಿಲು ಲಾಕ್ ಮಾಡಿಕೊಂಡಿದ್ದರು. ಸುಮಾರು 15 ನಿಮಿಷಗಳ ಕಾಲ ಯಾವುದೇ ಶಬ್ದ ಬಂದಿರಲಿಲ್ಲ. ರಾಯ್ ಅವರಿಗೆ ಎಂದಿಗೂ ಹೀಗೆ ಒಂಟಿಯಾಗಿ ಬಾಗಿಲು ಹಾಕಿಕೊಳ್ಳುವ ಅಭ್ಯಾಸವಿರಲಿಲ್ಲ. ಆ 15 ನಿಮಿಷಗಳ ನಂತರ ಹಠಾತ್ ಗುಂಡಿನ ಶಬ್ದ ಕೇಳಿಬಂದಿದೆ.

ಪೊಲೀಸ್ ತನಿಖೆ ಚುರುಕು: ಟಿ.ಜೆ. ಜೋಸೆಫ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ ಐಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ವಿಧಿವಿಜ್ಞಾನ ತಂಡ (FSL) ಸ್ಥಳಕ್ಕೆ ಭೇಟಿ ನೀಡಿ ರಕ್ತದ ಮಾದರಿ, ಪಿಸ್ತೂಲ್ ಮೇಲಿನ ಫಿಂಗರ್ ಪ್ರಿಂಟ್ ಹಾಗೂ ಮೊಬೈಲ್ ಫೋನ್ ಸೇರಿದಂತೆ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಕಳೆದ ಕೆಲವು ದಿನಗಳಿಂದ ಸಿ.ಜೆ.ರಾಯ್ ಅವರ ಕಚೇರಿಗಳ ಮೇಲೆ ಐಟಿ (ಆದಾಯ ತೆರಿಗೆ) ದಾಳಿಗಳು ನಡೆದಿದ್ದವು. ಈ ದಾಳಿಯಿಂದ ಅವರು ತೀವ್ರ ಬೇಸತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಐಟಿ ಅಧಿಕಾರಿಗಳ ಕಿರುಕುಳವೇ ಈ ಸಾವಿಗೆ ಕಾರಣವೇ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version