11:02 PM Saturday 13 - September 2025

ಗಣಪತಿ ವಿಸರ್ಜನೆ ವೇಳೆ ನಡೆದ ದುರಂತ: ಕೋಮುಬಣ್ಣ ಹಚ್ಚುವ ಅಹಿತ ಚಿಂತಕರಿಗೆ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

krishna byregowda
13/09/2025

ಹಾಸನ: ಮೊಸಳೆ ಹೊಸಹಳ್ಳಿ ಗಣಪತಿ ವಿಸರ್ಜನೆ ವೇಳೆ ನಡೆದ ದುರಂತಕ್ಕೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವ ಕೆಲವು ಅಹಿತ ಚಿಂತಕರು ಸಾಮಾಜಿಕ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಇಂತಹ ದುರ್ವರ್ತನೆಗಳು ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಸಹ ಗಟ್ಟಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ  ಎಚ್ಚರಿಕೆ ನೀಡಿದ್ದಾರೆ.

ದುರ್ಘಟನೆಯಲ್ಲಿ ಮೃತಪಟ್ಟ ಹೊಳೆನರಸೀಪುರ ತಾಲೂಕಿನ ಪ್ರಭಾಕರ್​​ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದೊಂದು ಕರುಳು ಹಿಂಡುವ ದುರ್ಘಟನೆ ಸರ್ಕಾರದ ಪರವಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಮೃತರ ಕುಟುಂಬದವರಿಗೆ ಆಗಿರುವ ನಷ್ಟವನ್ನು ಮಾತಿನಿಂದ ಭರಿಸುವುದು ಕಷ್ಟ. ಮಾತಿನಿಂದ ಅವರಿಗೆ ಏನೂ ಸಮಾಧಾನ ಆಗುವುದಿಲ್ಲ. ಆದರೆ ಅವರ ದುಃಖದಲ್ಲಿ ನಾವುಗಳು ಕೂಡ ದುಃಖಿಗಳಾಗಿ ಭಾಗಿಯಾಗಿದ್ದೇವೆ. ಇಂತಹ ಘಟನೆಗಳು ಮನುಷ್ಯರ ಮನಸ್ಸು, ಹೃದಯವನ್ನು ಕಲಕುತ್ತವೆ. ಮೃತಪಟ್ಟವರ ಕುಟುಂಬದವರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಘಟನೆಯಲ್ಲಿ ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ನಾನು ಕೂಡ ಜಿಲ್ಲಾಡಳಿಕ್ಕೆ ರಾತ್ರಿ ಎಷ್ಟು ಹೊತ್ತಾದರೂ ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಹಸ್ತಾಂತರಿಸುವಂತೆ ಸೂಚನೆ ಕೊಟ್ಟಿದ್ದೆ. ಅದರಂತೆ ಜಿಲ್ಲಾಡಳಿತ ರಾತ್ರಿಯೇ ಕಾರ್ಯೋನ್ಮುಖರಾಗಿ ರಾತ್ರಿ 3 ಗಂಟೆ ವೇಳೆಗೆ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಆಗಲೇ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದೆ ಎಂದು ತಿಳಿಸಿದರು.

ಟ್ರಕ್ ಅಪಘಾತವನ್ನು ವಿಡಿಯೋದಲ್ಲಿ ವೀಕ್ಷಿಸಿದಾಗ ಸಹಜವಾಗಿಯೇ ಅನುಮಾನ ಮೂಡುತ್ತದೆ. ಮೊದಲು ಬೈಕ್ ​ಗೆ ಡಿಕ್ಕಿ ಹೊಡೆದು, ನಂತರ ಪುನಃ ಆಕ್ಸಿಲೇಟರ್ ಒತ್ತಿದ ಹಿನ್ನೆಲೆ ಡಿವೈರ್ಡ್​ಗೆ ಡಿಕ್ಕಿ ಹೊಡೆದು ಗಣಪತಿ ಮೆರವಣಿಗೆಯಲ್ಲಿದ್ದ ಜನರ ಕಡೆ ನುಗ್ಗಿ ಸಾವು ನೋವಿಗೆ ಕಾರಣವಾಗಿದೆ, ಚಾಲಕ ಮದ್ಯ ಸೇವಿಸಿದ್ದನಾ ಎಂಬ ಬಗ್ಗೆ ರಾತ್ರಿಯೇ ಟ್ರಕ್ ಚಾಲಕನ ರಕ್ತದ ಮಾದರಿ ಪಡೆಯಲಾಗಿದ್ದು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೇವೆ. ರಕ್ತ ಪರೀಕ್ಷೆ ನಡೆಸಿ ಕೂಡಲೇ ವರದಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಈ ಘಟನೆಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿರುವ ಕೆಲವು ಅಹಿತ ಚಿಂತಕರು ಸಾಮಾಜಿಕ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಇಂತಹ ದುರ್ವರ್ತನೆಗಳು ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಸಹ ಗಟ್ಟಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version