ಇಂಡಿಯಾ ಒಕ್ಕೂಟಕ್ಕಾಗಿ ಡಿಕೆಶಿ-ಸ್ಟಾಲಿನ್ ನಡುವೆ ಕಾವೇರಿ ಒಳ ಒಪ್ಪಂದ: ರೈತಮುಖಂಡ ಭಾಗ್ಯರಾಜ್

ಚಾಮರಾಜನಗರ: ಇಂಡಿಯಾ ಒಕ್ಕೂಟ ಉಳಿಸಿಕೊಳ್ಳಲು, ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ನಡುವೆ ಒಳ ಒಪ್ಪಂದ ಆಗಿದೆ ಎಂದು ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ಚಾಮರಾಜನಗರದಲ್ಲಿ ರಾಜ್ಯ ಹಾಗೂ ತಮಿಳುನಾಡು ಸಿಎಂ ಅಣಕು ಶವಯಾತ್ರೆ ನಡೆಸಿ ಅವರು ಮಾತನಾಡಿ, ರೌಡಿಗಳು, ಭ್ರಷ್ಟರು ಅಧಿಕಾರಕ್ಕೆ ಬಂದರೆ ಇದೇ ರೀತಿ ಆಗಲಿದೆ.ಅಧಿಕಾರಕ್ಕೆ ಬರುವ ಮೊದಲು ಮೊಸಳೆ ಕಣ್ಣೀರು ಹಾಕುತ್ತಿದ್ದರು,ರೈತರನ್ನು ರಕ್ಷಣೆ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದರು. ಈಗ ರಾಜ್ಯ ಸರ್ಕಾರ ರೈತರ ಹಿತ ಕಾಯುತ್ತಿಲ್ಲ ಎಂದು ಕಿಡಿಕಾರಿದರು.
ಮೊದಲು ಸಚಿವ ಸಂಪುಟದಿಂದ ಡಿಕೆ ಶಿವಕುಮಾರ್ ರನ್ನ ವಜಾ ಮಾಡಬೇಕು, ಇಂಡಿಯಾ ಒಕ್ಕೂಟದ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡುತ್ತೇವೆ ಎಂದು ಡಿಕೆಶಿ- ಸ್ಟಾಲಿನ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ I.N.D.I.A ವನ್ನ ತೃಪ್ತಿ ಪಡಿಸಲು ಡಿಕೆಶಿ ಹೊರಟಿದ್ದಾರೆ, I.N.D.I.A ತೃಪ್ತಿ ಮಾಡಲು ನೀವು ಹೊರಟರೆ,ಕರ್ನಾಟಕ ನಿಮಗೆ ತಕ್ಕ ಉತ್ತರ ನೀಡುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಭಿ ಇದಾಗಿದೆ,
ನಾವು ಬೆಳೆಗಳಿಗೆ ನೀರು ಕೇಳ್ತಿಲ್ಲ, ಕುಡಿಯೋಕೆ ನೀರು ಕೇಳುತ್ತಿದ್ದೇವೆ, ಅದಕ್ಕೂ ತಾಕತ್ತು ಇಲ್ಲ ಅಂದ್ರೆ, ಮುಂದಿನ ದಿನಗಳಲ್ಲಿ ಇನ್ನೇನು ಏನು ಮಾಡುತ್ತೀರಾ ನೀವು ಎಂದು ಆಕ್ರೋಶ ಹೊರಹಾಕಿದರು.
ಹಿಂದೆ ಸಿದ್ದರಾಮಯ್ಯ ತೊಡೆ ತಟ್ಟಿದ್ದರು, ತೋಳು ತಟ್ಟಿದರು, ನಿಮಗೆ ತಾಕತ್ತು ಇದ್ರೆ ಈಗ ಪಾದಯಾತ್ರೆ ಮಾಡಿ,ತೊಡೆ ತಟ್ಟಿ, ಸರ್ವಪಕ್ಷ ಸಭೆಯಲ್ಲಿ ನೀರು ಬಿಡಲ್ಲ ಅಂತ ಹೇಳ್ತೀರಿ, ಕಾವೇರಿ ನಿರ್ವಹಣಾ ಮಂಡಳಿ ಆದೇಶ ಮಾಡ್ತು ಅಂತ ನೀರು ಬಿಡ್ತಿರಿ, ಯಾಕೆ ಕದ್ದು ಮುಚ್ಚಿ ನಾಟಕ ಮಾಡ್ತೀರಿ. ರಾಜಕಾರಣಿಗಳೇ ರೈತರ ಪ್ರಾಣ, ಹಾಗೂ ಕುಡಿಯೋ ನೀರಿನ ಜತೆ ಚೆಲ್ಲಾಟ ಅಡ್ತಿದೀರಿ. ಮುಂದಿನ ದಿನಗಳಲ್ಲಿ ನೀವು ಮನೆಗೆ ಹೋಗಬೇಕಾಗುತ್ತದೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಸರ್ಕಾರದಲ್ಲಿ ಈಗಲೇ ಅಪಸ್ವರ ಶುರುವಾಗಿದೆ, ಅದರ ಜತೆಗೆ ರೈತರು ಎದ್ದರೆ ನಿಮ್ಮ ಸರ್ಕಾರ ಉಳಿಯಲ್ಲ, ಅಂತಹ ಗುಂಡೂರಾವ್ ಸರ್ಕಾರವೇ ಉಳಿಯಲಿಲ್ಲ,ಇನ್ನು ನಿಮ್ಮ ಪುಟಗೋಸಿ ಸರ್ಕಾರ ಯಾವ ಲೆಕ್ಕ, ಈ ಪುಟಗೋಸಿ ಸರ್ಕಾರವನ್ನೂ ಮನೆಗೆ ಕಳುಹಿಸುತ್ತೇವೆ,ನೀವು ತಾತ್ಕಾಲಿಕವಾಗಿ ಮರೆಯಬಹುದು, ಅಡ್ಡಾದಿಡ್ಡಿಯಾಗಿ ಮಾತಾಡಬಹುದು, ಚಾಮರಾಜನಗರಕ್ಕೆ ಸಿಎಂ ಬಂದಾಗ ರೈತರ ಶಕ್ತಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.