9:07 AM Wednesday 20 - August 2025

ಚಲಿಸುತ್ತಿದ್ದ ಬಸ್ ನಿಂದ ಹಾರಿ ಮಾಜಿ ಯೋಧ ಆತ್ಮಹತ್ಯೆ

chikkodi
03/04/2021

ಚಿಕ್ಕೋಡಿ: ಸಾರಿಗೆ ಬಸ್ ನಿಂದ ಜಿಗಿದು ಮಾಜಿ ಸೈನಿಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

27 ವರ್ಷ ವಯಸ್ಸಿನ ಗೋಪಿನಾಥ್ ಜೋತಿರಾಮ ಜಾನವಾಡೆ ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕರಾಗಿದ್ದು,  ಬೆಳಗಾವಿಯಿಂದ ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿ ಕಡೆಗೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗೋಟುರ ಗ್ರಾಮ ಸಮೀಪಿಸುತ್ತಿದ್ದಂತೆಯೇ  ಬಸ್ ನ ಹಿಂಬದಿಯ ಡೋರ್ ತೆರೆದು ಏಕಾಏಕಿ ಹಾರಿದ್ದಾರೆ.

ಬಸ್ ನಿಂದ ಹಾರಿದ ಪರಿಣಾಮ ಗೋಪಿನಾಥ್ ಅವರು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್ ನ ಅಡಿಗೆ ಸಿಲುಕಿದ್ದು, ತಲೆಗೆ ತೀವ್ರವಾಗಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೂರು ವರ್ಷದ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದ ಮೃತ ಗೋಪಿನಾಥ್ ಅವರು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು ಎಂದು ಹೇಳಲಾಗಿದೆ.  ಬೆಳಗಾವಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ಬರುವ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅವರು ಹಾರಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version