ಇಂದಿನಿಂದ ಚಾಮರಾಜನಗರ ದಸರಾ: 4 ದಿನ ವೈವಿಧ್ಯಮಯ ಕಾರ್ಯಕ್ರಮ

ಚಾಮರಾಜನಗರ: ಇಂದಿನಿಂದ ಚಾಮರಾಜನಗರ ದಸರಾ ಆರಂಭಗೊಂಡಿದ್ದು 4 ದಿನಗಳ ಕಾಲ ಜಿಲ್ಲಾಕೇಂದ್ರದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಂದು ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ನಂದಿಕಂಬಕ್ಕೆ ಪೂಜೆ ಸಲ್ಲಿಸಿ ಚಾಮರಾಜನಗರ ದಸರಾಗೆ ಚಾಲನೆ ಕೊಟ್ಟರು.
ಚಾಮರಾಜೇಶ್ವರ ದೇಗುಲ ಆವರಣದಲ್ಲಿ ಪ್ರಧಾನ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವರು ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಮರಿತಿಬ್ಬೇಗೌಡ ಇದ್ದರು.
ಸಂಭ್ರಮದ ದಸರಾವಲ್ಲ- ಸಾಂಪ್ರದಾಯಿಕ ದಸರಾ: ಸಚಿವ ಕೆ.ವೆಂಕಟೇಶ್ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬಾರಿಯ ದಸರಾ ಸಂಭ್ರಮದ ದಸರಾವಲ್ಲ- ಸಾಂಪ್ರದಾಯಿಕ ದಸರಾ.ಮಳೆ ಅಭಾವ, ತಮಿಳುನಾಡಿನ ನೀರಿನ ಕ್ಯಾತೆಯಿಂದಾಗಿ ಸಂಭ್ರಮಪಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಹೇಳಿದರು.
ಈಗಾಗಲೇ ಮಳೆ ಇಲ್ಲದೇ ಬೆಳೆಗಳು ಒಣಗಿವೆ, ಮಳೆ ಬರದಿದ್ದರೇ ಮುಂದೆ ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ. ಚಾಮರಾಜೇಶ್ವರನಲ್ಲಿ ಬೇಡಿಕೊಂಡಿದ್ದೇನೆ ಈಗ ಆಗುವ ಬೆಳೆನಷ್ಟ ಆಗಿ ಹೋಗಿದೆ ಆದ್ದರಿಂದ ಕುಡಿಯಲು ಕುಡಿಯುವ ನೀರಿಗೆ ಯಾವ ತೊಂದರೆಯೂ ಆಗದಂತೆ ಬೇಡಿಕೊಂಡಿದ್ದೇನೆ, ಜನರು ಕೂಡ ಉತ್ತಮ ಮಳೆಯಾಗಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಡ್ಯಾಂಗಳಲ್ಲಿ ನೀರಿಲ್ಲ, ತಮಿಳುನಾಡು ನೀರು ಕೊಡಿ ಎಂದು ಕೇಳುತ್ತಿದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡಿ ಎನ್ನುತ್ತಿದ್ದು ನಾವು ನೀರು ಬಿಡಲಾಗಲ್ಲ ಎಂದು ಮನವಿ ಮಾಡಿದರೂ ನಮ್ಮ ಮಾತನ್ನು ಅದು ಕೇಳಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಾಮರಾಜನಗರ ದಸರಾ ಪ್ರಯುಕ್ತ ನಗರದಲ್ಲಿ ಚಿತ್ರಕಲಾ ಪ್ರದರ್ಶನ, ದಸರಾ ಕವಿಗೋಷ್ಠಿ, ಮಹಿಳಾ ಸಂಘಗಳ ಉತ್ಪನ್ನಗಳ ಮಾರಾಟ ಮೇಳಗಳಿಗೆ ಸಚಿವರು ಚಾಲನೆ ಕೊಟ್ಟರು.