1:44 PM Wednesday 17 - December 2025

ಚೆನ್ನೈ ದುರಂತ: ನರ್ಸಿಂಗ್ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ ಗೆಳೆಯ..!

02/12/2023

ಚೆನ್ನೈನಲ್ಲಿ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಗೆಳೆಯನೇ ಕೊಂದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ. ಆರೋಪಿಯನ್ನು ಆಶಿಕ್ ಎಂದು ಗುರುತಿಸಲಾಗಿದೆ. ಹೋಟೆಲ್‌ನಲ್ಲಿ ತಂಗಿದ್ದಾಗ ಯುವತಿಯನ್ನು ಕೊಲೆ ಮಾಡಿದ್ದಾನೆ. ಅಲ್ಲದೇ ಆರೋಪಿ ಆಶಿಕ್ ತಾನು ಕೊಂದ ಗೆಳತಿಯ ಶವದ ಚಿತ್ರವನ್ನು ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿದ್ದ.

ಸಂತ್ರಸ್ತೆಯ ಸ್ನೇಹಿತರು ಇದನ್ನು ಗಮನಿಸಿ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ‌ನೀಡಿದ ಬಳಿಕ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ. ದಾಳಿ‌ ನಡೆಸಿದ ವೇಳೆ ಹೋಟೆಲ್ ಕೋಣೆಯಲ್ಲಿ ಸಂತ್ರಸ್ತೆಯ ಮೃತದೇಹವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಕೊಲೆಯಾದ ವಿದ್ಯಾರ್ಥಿನಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಐದು ವರ್ಷಗಳಿಂದ ಆಶಿಕ್ ಜೊತೆ ಸಂಬಂಧ ಹೊಂದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಇತ್ತೀಚಿಗೆ ಇವರಿಬ್ಬರು ನಗರದಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು ಒಟ್ಟಿಗೆ ವಾಸಿಸುತ್ತಿದ್ದರು.

ಸಂತ್ರಸ್ತೆ ಸತತ ಮೂರು ದಿನಗಳಿಂದ ಕಾಲೇಜಿಗೆ ಹೋಗಿರಲಿಲ್ಲ. ಹೀಗಾಗಿ ಈಕೆಯ ಅನುಪಸ್ಥಿತಿಯ ಬಗ್ಗೆ ಚಿಂತಿತರಾದ ಆಕೆಯ ಸ್ನೇಹಿತರು ಈ ವಿಷಯದ ಬಗ್ಗೆ ತನಿಖೆ ನಡೆಸಿದರು. ಇದೇ ವೇಳೆ ಆಶಿಕ್ ಅವಳನ್ನು ಚೆನ್ನೈಗೆ ಕರೆದೊಯ್ದು, ಅವಳ ಇಚ್ಛೆಗೆ ವಿರುದ್ಧವಾಗಿ ಹೋಟೆಲ್ ಕೋಣೆಯನ್ನು ಕಾಯ್ದಿರಿಸಿದ್ದ ಎಂಬುದು ಬಯಲಾಗಿದೆ.

ಆಶಿಕ್ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಈ ದುರಂತ ಚಿತ್ರವನ್ನು‌ ಪೋಸ್ಟ್ ಮಾಡಿದಾಗ ಎಲ್ಲರಿಗೂ ಆಘಾತವಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಸಮಗ್ರ ತನಿಖೆ ನಡೆಸಿ. ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಆಶಿಕ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಆಶಿಕ್ ತನ್ನ ಟೀ ಶರ್ಟ್ ನಿಂದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತು ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

Exit mobile version