ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಆರೋಪ

chikkamagaluru
05/06/2026

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕೆಫೆ ಕಾರ್ಮಿಕನ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

ನೇಪಾಳ ಮೂಲದ ಕೆಫೆ ಕಾರ್ಮಿಕ ಬಾಬುರಾಮ್ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಹರ್ಷ ಹಾಗೂ ಆತನ ಸ್ನೇಹಿತ ಶಶಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಹರ್ಷ ಎನ್.ಆರ್.ಪುರದಲ್ಲಿ ಎಲೆಕ್ಟ್ರಿಷಿಯನ್ ಗುತ್ತಿಗೆದಾರನಾಗಿದ್ದು, ರಾತ್ರಿ 10.30ರ ಸುಮಾರಿಗೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ಬಾಬುರಾಮ್ ಅವರನ್ನು ಕರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಬಾಬುರಾಮ್ ತಡವಾಗಿ ಬಂದಿದ್ದಕ್ಕೆ ಆಕ್ರೋಶಗೊಂಡ ಆರೋಪಿಗಳು ಕೆಫೆಗೆ ನುಗ್ಗಿ, “ಕರೆದ ಕೂಡಲೇ ಬರಲು ಆಗಲ್ವಾ?” ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನೆ ನಡೆದ ಕೆಫೆಯಲ್ಲಿ ಟೇಬಲ್ ಅಥವಾ ಕಾರಿಗೆ ಸರ್ವಿಸ್ ವ್ಯವಸ್ಥೆ ಇಲ್ಲದೇ, ಸೆಲ್ಫ್ ಸರ್ವಿಸ್ ವ್ಯವಸ್ಥೆ ಮಾತ್ರ ಇದೆ ಎನ್ನಲಾಗಿದೆ.

ಗಲಾಟೆ ನಡೆಯುತ್ತಿದ್ದ ವೇಳೆ ಕೆಫೆ ಮಾಲೀಕರು ಸ್ಥಳಕ್ಕೆ ಬಂದರೂ, ಕನ್ನಡ ಭಾಷೆ ಬಾರದ ಬಾಬುರಾಮ್ ಮೇಲೆ ಹಲ್ಲೆ ಮುಂದುವರಿದಿದೆ ಎಂದು ಆರೋಪಿಸಲಾಗಿದೆ. ಘಟನೆಯ ಬಗ್ಗೆ 112ಕ್ಕೆ ಕರೆ ಮಾಡಿದ ಕೆಫೆ ಮಾಲೀಕರಿಗೂ ಆರೋಪಿಗಳು ಬೆದರಿಕೆ ಹಾಕಿದ್ದು, “ಎಫ್‌ ಐಆರ್ ಮಾಡಿಸು, ನೋಡಿಕೊಳ್ಳುತ್ತೇನೆ” ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಬಾಬುರಾಮ್ ಅವರ ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ರಕ್ತಸ್ರಾವದೊಂದಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version