ಮಂಗಳೂರು ಮೂಲದ ಯುವಕರಿಂದ ದರೋಡೆ: ತಡೆಯಲು ಬಂದ ವ್ಯಕ್ತಿಯ ಕೈ ಕಡಿದ ದರೋಡೆಕೋರರು

ಕೊಟ್ಟಿಗೆಹಾರ: ನಾಲ್ವರು ಮಂಗಳೂರು ಮೂಲದ ಯುವಕರು ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿ ಮನೆಯವರಿಗೆ ಖಾರದ ಪುಡಿ ಎರಚಿ ದರೋಡೆ ನಡೆಸಿದ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರಿ 8 ಗಂಟೆಗೆ ಮನೆಗೆ ನುಗ್ಗಿದ ಯುವಕರು ಡಕಾಯಿತಿ ನಡೆಸಿದ್ದಾರೆ.
ಇಲ್ಲಿನ ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬುವರ ಮನೆಗೆ ನುಗ್ಗಿದ ದರೋಡೆಕೋರರು 5 ಲಕ್ಷ ನಗದು, 30 ಗ್ರಾಂ ಮಾಂಗಲ್ಯ ಸರವನ್ನ ಹೊತ್ತೊಯ್ದಿದ್ದಾರೆ.
ಮನೆ ಮಾಲೀಕನ ಕುತ್ತಿಗೆಗೆ ಲಾಂಗ್ ಇಟ್ಟು ದರೋಡೆಕೋರರು ದರೋಡೆ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಮಾಲೀಕನನ್ನ ಬಿಡಿಸಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬಾತನ ಕೈಯನ್ನೇ ಕಡಿದಿದ್ದಾರೆ.
ಗಲಾಟೆ, ಬೊಬ್ಬೆ ಕೇಳಿ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ ಮೂವರು ಕಾರಿನಲ್ಲಿ ಎಸ್ಕೇಪ್ ಆಗಿದ್ದರೆ, ಓರ್ವ ಅರಮನೆ ತಲಗೂರು ಎಂಬ ಗ್ರಾಮದಲ್ಲಿ ಅರಣ್ಯದಲ್ಲಿ ಅವಿತು ಕೂತಿದ್ದು, ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಾಳೂರು ಠಾಣಾ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.