ಮಗು ಅತ್ತರೆ ಶೌಚಾಲಯದಲ್ಲಿ, ವಾಷಿಂಗ್ ಮೆಷಿನ್ ನಲ್ಲಿ ಕೂಡಿ ಹಾಕಿ ಕ್ರೌರ್ಯ: ಕ್ಯಾಪ್ ಜೆಮಿನಿ ಡೇ ಕೇರ್ ನ ಐವರು ಸಿಬ್ಬಂದಿ ವಿರುದ್ಧ ಎಫ್ ಐಆರ್
ಬೆಂಗಳೂರು: ಟೆಕ್ಕಿ ದಂಪತಿಗಳು ತಮ್ಮ ಮಕ್ಕಳನ್ನು ನಂಬಿ ಬಿಟ್ಟು ಹೋಗುವ ಡೇ ಕೇರ್ (ಶಿಶುಪಾಲನಾ ಕೇಂದ್ರ) ಕೇಂದ್ರವೊಂದರಲ್ಲಿ ಪುಟಾಣಿ ಮಕ್ಕಳ ಮೇಲೆಯೇ ಭೀಕರ ಕ್ರೌರ್ಯ ಎಸಗಿರುವ ಅತ್ಯಂತ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಬ್ರೂಕ್ಫೀಲ್ಡ್ನಲ್ಲಿರುವ ಖ್ಯಾತ ತಂತ್ರಜ್ಞಾನ ಸಂಸ್ಥೆ ‘ಕ್ಯಾಪ್ಜೆಮಿನಿ’ (Capgemini) ಆವರಣದಲ್ಲಿರುವ ಡೇ ಕೇರ್ ಸೆಂಟರ್ನಲ್ಲಿ, ಮಕ್ಕಳು ಅತ್ತರೆಂಬ ಕಾರಣಕ್ಕೆ ಐವರು ಆಯಾಗಳು (ನಾನಿಗಳು) ಅಮಾನವೀಯವಾಗಿ ಹಿಂಸೆ ನೀಡುತ್ತಿದ್ದರು ಎಂಬುದು ಬಯಲಾಗಿದೆ. ಮಕ್ಕಳ ಮೇಲೆ ನಡೆಯುತ್ತಿದ್ದ ಈ ದೌರ್ಜನ್ಯದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಹೆಚ್.ಎಲ್.ಪಿ (HAL) ಠಾಣೆ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಫ್ಟ್ ವೇರ್ ಉದ್ಯೋಗಿಗಳ 2ರಿಂದ 3 ವರ್ಷದ ಪುಟ್ಟ ಮಕ್ಕಳು ಅತ್ತಾಗ ಅಥವಾ ಹಠ ಮಾಡಿದಾಗ ಈ ಆಯಾಗಳು ಬೆದರಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಕ್ಕಳಿಗೆ ಅತಿ ಕ್ರೂರವಾಗಿ ಹಿಂಸೆ ನೀಡುತ್ತಿದ್ದರು. ಚೈಲ್ಡ್ ಹೆಲ್ಪ್ಲೈನ್ ಅಧಿಕಾರಿಗೆ ಲಭ್ಯವಾಗಿರುವ 4 ವಿಡಿಯೋಗಳಲ್ಲಿ ಈ ಆಯಾಗಳ ಕ್ರೌರ್ಯ ಬಯಲಾಗಿದೆ.
ಮಕ್ಕಳು ಅತ್ತಾಗ ಅವರನ್ನು ಶೌಚಾಲಯದಲ್ಲಿ ಕೂಡಿ ಹಾಕುವುದು. ಶೌಚಾಲಯದ ಹೆಲ್ತ್ ಫಾಸೆಟ್ (Toilet Jet) ಮೂಲಕ ಬಲವಂತವಾಗಿ ಮಕ್ಕಳ ಬಾಯಿಗೆ ನೀರು ಸಿಂಪಡಿಸುವುದು. ಫ್ರಂಟ್ ಲೋಡಿಂಗ್ ವಾಷಿಂಗ್ ಮೆಷಿನ್ನೊಳಗೆ ಮಕ್ಕಳನ್ನು ಕೂರಿಸುವುದು.
ಡೇ ಕೇರ್ನಲ್ಲೇ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಸಿಬ್ಬಂದಿ ಈ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದರು ಎನ್ನಲಾಗಿದೆ.
ಐವರ ವಿರುದ್ಧ ಕೇಸ್ ದಾಖಲು:
ಚೈಲ್ಡ್ ಹೆಲ್ಪ್ಲೈನ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಹೆಚ್ಎಎಲ್ ಪೊಲೀಸರು ಮಂಜುಳಾ, ವಿಜಯಲಕ್ಷ್ಮಿ, ಭವಾನಿ, ಸಿಂಧು ಮತ್ತು ಬಿಂದು ಎಂಬ ಐವರು ಆಯಾಗಳ ವಿರುದ್ಧ ಜುವೆನೈಲ್ ಜಸ್ಟಿಸ್ ಆಕ್ಟ್ (ಬಾಲನ್ಯಾಯ ಕಾಯ್ದೆ) ಹಾಗೂ ಬಿಎನ್ಎಸ್ ಸೆಕ್ಷನ್ 351 (ಅಪರಾಧದ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕ್ಯಾಪ್ ಜೆಮಿನಿ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, “ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬದವರ ಸುರಕ್ಷತೆ ಹಾಗೂ ಆರೋಗ್ಯವೇ ನಮಗೆ ಮೊದಲ ಆದ್ಯತೆ. ತನಿಖೆಗಾಗಿ ನಾವು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಕ್ಯಾಂಪಸ್ ನಲ್ಲಿರುವ ಡೇ ಕೇರ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ” ಎಂದು ತಿಳಿಸಿದೆ.
ತಮ್ಮ ಪುಟ್ಟ ಕಂದಮ್ಮಗಳ ಮೇಲೆ ನಡೆದಿರುವ ಈ ಕ್ರೌರ್ಯವನ್ನು ನೋಡಿ ಟೆಕ್ಕಿ ಪೋಷಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮಕ್ಕಳ ಪೋಷಕರನ್ನೂ ಸಂಪರ್ಕಿಸಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























