ಸಿಎಂ ಸಿದ್ದರಾಮಯ್ಯ—ಬಿ.ಕೆ.ಹರಿಪ್ರಸಾದ್ ಭೇಟಿ: ಕರಾವಳಿಯ ಹಿಂಸಾ ಘಟನೆಗಳ ಬೆನ್ನಲ್ಲೇ ಮಹತ್ವದ ಬೆಳವಣಿಗೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ವರದಿಗಳ ಪ್ರಕಾರ ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು, ಕೋಮುದ್ವೇಷದ ಬಗ್ಗೆ ಸಿಎಂ ಬಿ.ಕೆ.ಹರಿಪ್ರಸಾದ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ವಿರುದ್ಧ ವ್ಯಾಪಕ ಆಕ್ರೋಶ ಉಂಟಾಗಿದೆ. ಕಾಂಗ್ರೆಸ್ ನಲ್ಲಿರುವ ಮುಸ್ಲಿಮ್ ನಾಯಕರು ಒಬ್ಬೊಬ್ಬರಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಈ ಕ್ಷಿಪ್ರ ಬೆಳವಣಿಗೆ ನಡುವೆ ಸಿಎಂ ಸಿದ್ದರಾಮಯ್ಯ ಅವರು ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ ಚರ್ಚೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಕೂಡ ಜೊತೆಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಕ್ಷಣದಲ್ಲೇ ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಕೈಗೊಳ್ಳಬಹುದಾಗಿರುವ ಕ್ರಮಗಳ ಬಗ್ಗೆ ಬಿ.ಕೆ.ಹರಿಪ್ರಸಾದ್ ಜೊತೆಗೆ ಹಲವು ಸಲಹೆಗಳನ್ನು ಸಿಎಂ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಗೃಹ ಸಚಿವರ ಬದಲಾವಣೆಗೆ ಒತ್ತಾಯ:
ಕರಾವಳಿಯಲ್ಲಿ ಗೃಹ ಸಚಿವರ ಬದಲಾವಣೆಗೆ ಭಾರೀ ಒತ್ತಾಯ ಕೇಳಿ ಬರುತ್ತಿದೆ. ಬಿ.ಕೆ.ಹರಿಪ್ರಸಾದ್ ಅವರುರ ಸಮರ್ಥರಾಗಿದ್ದು, ನೇರ ನಿಷ್ಠೂರ ಕ್ರಮ ಜರುಗಿಸಲು ಬಿ.ಕೆ.ಹರಿಪ್ರಸಾದ್ ರಂತಹ ನಾಯಕರ ನೇತೃತ್ವ ಅಗತ್ಯವಿದೆ ಎನ್ನುವ ಒತ್ತಾಯ ಕೇಳಿ ಬಂದಿದೆ. ಜೊತೆಗೆ ಉಸ್ತುವಾರಿ ಸಚಿವರು ಇದ್ದೂ ಇಲ್ಲದಂತಿದ್ದಾರೆ, ಅವರು ಅತಿಥಿ ಸಚಿವರಂತೆ ವರ್ತಿಸುತ್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ಮಂಗಳೂರಿನಲ್ಲಿ ಸಚಿವರ ಭಾಷಣಗಳನ್ನು ಕೇಳಲು ಯಾರೂ ಸಿದ್ಧರಿಲ್ಲ, ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD