ಭಯಾನಕ: ಉತ್ತರಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ: ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್..!

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಮತ್ತು ಕೃತ್ಯದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಫತೇಪುರದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಕೇಸನ್ನು ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ತನ್ನ ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಯುವತಿ ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಕೆಲವು ಪುರುಷರು ಅವಳನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಆಕೆ ಪ್ರತಿರೋಧ ನೀಡಿದ್ದಕ್ಕೆ ಆಕೆಗೆ ಮಾದಕ ದ್ರವ್ಯವನ್ನು ನೀಡಲಾಯಿತು. ನಂತರ ಅವಳು ಪ್ರಜ್ಞೆ ಕಳೆದುಕೊಂಡಿದ್ದಾಳೆ.

ಘಟನೆ ನಡೆದ ಮೂರು ದಿನಗಳ ನಂತರ ತನ್ನ ವೈರಲ್ ವೀಡಿಯೊವನ್ನು ನೋಡಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಗ್ರಾಮದ ಮುಖ್ಯಸ್ಥನ ಸಂಬಂಧಿ ಎಂದು ಮಹಿಳೆ ಗುರುತಿಸಿದ್ದಾಳೆ. ಕೆಲವು ಆರೋಪಿಗಳು ಈ ಕೃತ್ಯವನ್ನು ಚಿತ್ರೀಕರಿಸಿದ್ದಾರೆ.

ಇನ್ನು‌ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಫತೇಪುರದ ಹೆಚ್ಚುವರಿ ಎಸ್ಪಿ ವಿಜಯ್ ಶಂಕರ್ ಮಿಶ್ರಾ, ಸಂತ್ರಸ್ತೆಯ ತಂದೆಯಿಂದ ದೂರು ಸ್ವೀಕರಿಸಿದ್ದು, ಅದರಲ್ಲಿ ತನ್ನ ಮಗಳಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಿಶ್ರಾ ಹೇಳಿದರು.