ಆಕಸ್ಮಿಕವಾಗಿ ಹಾರಿದ ಗುಂಡಿಗೆ ಪತ್ನಿ ಬಲಿ: ಕಾಂಗ್ರೆಸ್ ಸಂಸದನ ಸೋದರಳಿಯ ಆತ್ಮಹತ್ಯೆ
ಅಹಮದಾಬಾದ್: ಗುಜರಾತ್ ಕಾಂಗ್ರೆಸ್ ಸಂಸದ ಶಕ್ತಿ ಸಿಂಗ್ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಸಿಂಗ್ ಗೋಹಿಲ್ (35), ಆಕಸ್ಮಿಕವಾಗಿ ಪತ್ನಿಗೆ ಗುಂಡು ಹಾರಿಸಿ ಆಕೆಯ ಸಾವಿಗೆ ಕಾರಣರಾದ ಬೆನ್ನಲ್ಲೇ, ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೋರಣ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ.
ಘಟನೆಯ ವಿವರ: ಅಹಮದಾಬಾದ್‌ನ ಐದನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಗುಜರಾತ್ ಮ್ಯಾರಿಟೈಮ್ ಬೋರ್ಡ್‌ನಲ್ಲಿ ಕ್ಲಾಸ್-1 ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯಶ್‌ರಾಜ್ ಸಿಂಗ್, ಕಳೆದ ನವೆಂಬರ್‌ನಲ್ಲಿ ರಾಜೇಶ್ವರಿ (30) ಎಂಬವರನ್ನು ವಿವಾಹವಾಗಿದ್ದರು.
ವರದಿಗಳ ಪ್ರಕಾರ, ಮಲಗುವ ಕೋಣೆಯಲ್ಲಿದ್ದಾಗ ಯಶ್ ರಾಜ್ ಅವರ ಪರವಾನಗಿ ಪಡೆದ ರಿವಾಲ್ವರ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಪತ್ನಿ ರಾಜೇಶ್ವರಿಯವರ ತಲೆಯ ಹಿಂಭಾಗಕ್ಕೆ ತಗುಲಿದೆ. ತಕ್ಷಣವೇ ಗಾಬರಿಗೊಂಡ ಯಶ್‌ರಾಜ್ ಕುಟುಂಬದವರಿಗೆ ವಿಷಯ ತಿಳಿಸಿ ಆಂಬ್ಯುಲೆ ನ್ಸ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅರೆವೈದ್ಯಕೀಯ ಸಿಬ್ಬಂದಿ ರಾಜೇಶ್ವರಿ ಮೃತಪಟ್ಟಿರುವುದನ್ನು ದೃಢಪಡಿಸಿದರು.
ನೊಂದು ಆತ್ಮಹತ್ಯೆಗೆ ಶರಣು: ಪತ್ನಿಯ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾದ ಯ ಶ್‌ರಾಜ್ ಸಿಂಗ್, ಸ್ವಲ್ಪ ಸಮಯದಲ್ಲೇ ತಮ್ಮ ಕೋಣೆಗೆ ತೆರಳಿ ಅದೇ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತು ಕುಟುಂಬಸ್ಥರು ಕೋಣೆಯ ಒಳಗೆ ಹೋದಾಗ ಯಶ್ ರಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಎಸಿಪಿ ಜಿತೇಂದ್ರ ಬ್ರಹ್ಮಭಟ್ ಈ ಕುರಿತು ಮಾಹಿತಿ ನೀಡಿದ್ದು, “ಪ್ರಾಥಮಿಕ ತನಿಖೆಯ ಪ್ರಕಾರ ಇದು ಆಕಸ್ಮಿಕವಾಗಿ ನಡೆದ ಘಟನೆ ಮತ್ತು ಅದರಿಂದ ನೊಂದು ಮಾಡಿಕೊಂಡ ಆತ್ಮಹತ್ಯೆ ಎಂದು ತೋರುತ್ತಿದೆ. ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ಕಾಂಗ್ರೆಸ್ ಸಂಸದ ಶಕ್ತಿ ಸಿಂಗ್ ಗೋಹಿಲ್ ಅವರ ಕುಟುಂಬ ಮತ್ತು ಅಹಮದಾಬಾದ್‌ನಲ್ಲಿ ಶೋಕ ಮಡುಗಟ್ಟಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























