ಕಾಲೇಜಿನಲ್ಲಿ ಜೈ ಶ್ರೀರಾಮ್‌ ಹಾಡಿನ ವಿವಾದ: ಪೊಲೀಸರಿಂದ ಕಟ್ಟೆಚ್ಚರ

guru nanak dev engineering college
30/05/2024

ಬೀದರ್‌:   ಜೈ ಶ್ರೀರಾಮ್‌ ಹಾಡಿನ ವಿಷಯವಾಗಿ ನಗರದ ಮೈಲೂರಿನ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗೊಂದಲ ಸೃಷ್ಟಿಯಾದ ಘಟನೆ ನಡೆದಿದ್ದು, ಘಟನೆ ಹಿನ್ನೆಲೆ ರಾತ್ರಿಯಿಂದಲೇ ಪೊಲೀಸರು ಹೈ ಅಲರ್ಟ್‌ ಆಗಿದ್ದಾರೆ.

ಘಟನೆಗೆ ಕೆಲವು ಮುಖಂಡರು, ಸಂಘಟನೆಗಳು ಕೋಮು ಬಣ್ಣ ಹಚ್ಚುವ ಪ್ರಯತ್ನಗಳು ಕಂಡು ಬಂದ ಹಿನ್ನೆಲೆ ಬೀದರ್ ಪೊಲೀಸರು ಸಕಾಲದಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಗುರುನಾನಕ ಕಾಲೇಜಿನ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಗುರುವಾರ, ಶುಕ್ರವಾರ (ಮೇ 30, 31) ಕಾಲೇಜಿನಲ್ಲಿ ನಡೆಯಬೇಕಿದ್ದ ವಾರ್ಷಿಕ ‘ಫೆಸ್ಟ್‌’ ರದ್ದುಗೊಳಿಸಲಾಗಿದೆ.

ನಗರದ ಮೈಲೂರ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಓಲ್ಡ್‌ ಸಿಟಿಯ ಚೌಬಾರ ಸೇರಿದಂತೆ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.

ಕಾಲೇಜು ‘ಫೆಸ್ಟ್‌’ ಅಂಗವಾಗಿ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ನೃತ್ಯಾಭ್ಯಾಸ ಮಾಡುತ್ತಿದ್ದರು.  ಈ ವೇಳೆ ಜೈ ಶ್ರೀರಾಮ್ ಎಂಬ ಡಿಜೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದೆ. ಈ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಕಾಲೇಜು ಕ್ಯಾಂಪಸ್ ರಣರಂಗವಾಗಿ ಮಾರ್ಪಟ್ಟಿತ್ತು.

ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕಾದ ವಿದ್ಯಾರ್ಥಿಗಳು ಇದೀಗ ಪರಸ್ಪರ ಹೊಡೆದಾಡಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು—ಪ್ರತಿ ದೂರು ನೀಡುತ್ತಾ ಠಾಣೆ ಮೆಟ್ಟಿಲೇರಿದ್ದಾರೆ.  ಗಾಂಧಿ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version