ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ ವಿರುದ್ಧ ಸಿಪಿಐಎಂ ಮುಖಂಡ ಶೇಖರ ಲಾಯಿಲ ಏಕಾಂಗಿ ಪ್ರತಿಭಟನೆ

marallugareki
24/03/2023

ಬೆಳ್ತಂಗಡಿ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಮುಖಂಡ ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆಸುತ್ತಿರುವ ಏಕಾಂಗಿ ಪ್ರತಿಭಟನೆ ಇಂದಿಗೆ ನಾಲ್ಕನೇ ದಿನಕ್ಕೆ ಮುಂದುವರಿದಿದೆ.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೇಖರ ಲಾಯಿಲ, ತಾಲೂಕಿನಲ್ಲಿ ಕೇವಲ ಐದು ಮಂದಿಗೆ ಮಾತ್ರ ನದಿಯಿಂದ ಮರಳು ತೆಗೆಯಲು ಅಧಿಕೃತ ಪರವಾನಿಗೆ ನೀಡಲಾಗಿದೆ. ಆದರೆ ತಾಲೂಕಿನ ಎಲ್ಲ ನದಿಗಳಲ್ಲಿ, ತೊರೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ನೂರಾರು ಕಡೆಗಳಲ್ಲಿ ನಡೆಯುತ್ತಿರುವ ಈ ಮರಳುಗಾರಿಕೆ ವಿರುದ್ದ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.

ಅಕ್ರಮ ಮರಳುಗಾರಿಕೆ ಯೊಂದಿಗೆ ತಾಲೂಕು ಆಡಳಿತ ಪೊಲೀಸ್ ಇಲಾಖೆ ಕೈಜೋಡಿಸಿದೆ ಎಂಬ ಅನುಮಾನ ಬರುವಂತಾಗಿದೆ. ಮರಳು ಗಾರಿಕೆ ವಿರುದ್ದ ಕ್ರಮ ಕೈಗೊಳ್ಖುವಂತೆ ಎಷ್ಟು ಮನವಿ ಸಲ್ಲಿಸಿದರೂ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅದ್ದರಿಂದಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ ಎಂದು ಹೇಳಿದರು.

ಅಕ್ರಮ ಮರಳುಗಾರಿಕೆ ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರವಾಗಿ ಬೆಳೆದಿದೆ ಈ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸುವ ವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಪ್ರವಾಹದ ಬಳಿಕ ನಡೆಸಿದ ಕಾಮಗಾರಿಗಳು ಕಳಪೆಯಾಗಿದ್ದು ನೀರುಪಾಲಾಗಿದೆ, ಅದೇ ರೀತಿ ರಸ್ತೆ ಸೇರಿದಂತೆ ಕಾಮಗಾರಿಗಳು ಕಳಪೆಯಾಗಿದೆ, ಟೆಂಡರ್ ಪ್ರಕ್ರಿಯೆಯಲ್ಲಿ ಯೂ ಭಾರೀ ಅಕ್ರಮ ನಢಯುತ್ತಿದೆ. ನಕಲಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ ಈ ಎಲ್ಲ ವಿಚಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೇನೆ ಎಂದು ಹೇಳಿದರು.

ಈ ಬಗ್ಗೆ ಸ್ಪಷ್ಟ ಭರವಸೆ ಸಿಗುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ 5.30 ರ ವರೆಗೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ಮುಂದುವರಿಸಲಾಗುವು ದು ಎಂದು ಅವರು ಮಾಹಿತಿ ನೀಡಿದರು.

ನಾನು ಇಷ್ಟು ದಿನದಿಂದ ಧರಣಿ ಕುಳಿತಿದ್ದರೂ ತಾಲೂಕು ಆಡಳಿತ ಆಗಲಿ ಜಿಲ್ಲಾ ಆಡಳಿತ ಆಗಲಿ ಮಾತನಾಡಿಸಲು ಬಂದಿಲ್ಲ, ಇದರಿಂದ ನನಗೇನು ಚಿಂತೆ ಇಲ್ಲ ಬೆಳ್ತಂಗಡಿ ತಹಶೀಲ್ದಾರ್ ಆಗಿರಬಹುದು ಪೊಲೀಸ್ ಇಲಾಖೆ ಆಗಿರಬಹುದು ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಗಿರಬಹುದು ಮರಳು ದಂಧೆಕೋರರ ಜೊತೆ ನೇರ ಶಾಮಿಲಾಗಿರುವುದರಿಂದ ನಾನು ನಾಲ್ಕು ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version