ಶಾಸಕರ ಭವನದ ವಾಹನ ದುರ್ಬಳಕೆಗೆ ಬ್ರೇಕ್: ಶಾಸಕರ ಸಂಬಳದಲ್ಲೇ ಬಾಡಿಗೆ ಕಡಿತಕ್ಕೆ ಹೊಸ ಮಾರ್ಗಸೂಚಿ!
ಬೆಂಗಳೂರು: ಶಾಸಕರ ಭವನದಲ್ಲಿರುವ (ಎಲ್ಎಚ್) ಸರ್ಕಾರಿ ವಾಹನಗಳ ದುರ್ಬಳಕೆಗೆ ಕಡಿವಾಣ ಹಾಕಲು ವಿಧಾನಸಭೆ ಕಾರ್ಯಾಲಯ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಶಾಸಕರ ಹೆಸರಿನಲ್ಲಿ ಬಳಸಲಾಗುವ ವಾಹನಗಳ ಬಾಡಿಗೆ ವೆಚ್ಚವನ್ನು ನೇರವಾಗಿ ಆಯಾ ಶಾಸಕರ ವೇತನದಿಂದಲೇ ವಸೂಲಿ ಮಾಡಲು ಕಡ್ಡಾಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಹಾಲಿ ಹಾಗೂ ಮಾಜಿ ಶಾಸಕರ ವಾಹನ ಬಳಕೆಗೆ ಸಂಬಂಧಿಸಿದಂತೆ ಈ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದ್ದಾರೆ.
ಇದುವರೆಗೆ ಶಾಸಕರ ಹೆಸರಿನಲ್ಲಿ ಅವರ ವೈಯಕ್ತಿಕ ಸಹಾಯಕರು (ಪಿಎ), ಪಕ್ಷದ ಕಾರ್ಯಕರ್ತರು, ಅತಿಥಿಗಳು ಹಾಗೂ ಪರಿಚಯಸ್ಥರು ಶಿಫಾರಸು ಪತ್ರಗಳ ಮೂಲಕ ವಾಹನಗಳನ್ನು ಪಡೆದು ಹೊರ ಜಿಲ್ಲೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದರಿಂದಾಗಿ ನಿಜವಾಗಿ ಅಗತ್ಯವಿರುವ ಶಾಸಕರಿಗೆ ವಾಹನಗಳ ಕೊರತೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಶಾಸಕರು ತಮ್ಮ ಪಿಎ ಅಥವಾ ಅತಿಥಿಗಳ ಬಳಕೆಗಾಗಿ ವಾಹನಗಳನ್ನು ಶಿಫಾರಸು ಮಾಡುವ ಪದ್ಧತಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.
ಹೊಸ ನಿಯಮದ ಪ್ರಕಾರ, ಶಾಸಕರ ಭವನದ ವಾಹನಗಳ ಸಂಚಾರವನ್ನು ಕೇವಲ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯೊಳಗೆ ಮಾತ್ರ ಸೀಮಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವುದನ್ನು ಹೊರತುಪಡಿಸಿ, ಜಿಬಿಎ ವ್ಯಾಪ್ತಿಯಿಂದ ಹೊರಗೆ ವಾಹನಗಳನ್ನು ಕೊಂಡೊಯ್ಯಲು ಅನುಮತಿ ಇರುವುದಿಲ್ಲ. ತೀರಾ ತುರ್ತು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಹೊರ ಜಿಲ್ಲೆಗಳಿಗೆ ವಾಹನ ತೆಗೆದುಕೊಂಡು ಹೋಗಬೇಕಾದರೆ ವಿಧಾನಸಭಾಧ್ಯಕ್ಷರ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ.
ಶಾಸಕರ ಭವನದಲ್ಲಿ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಹಾಗೂ ಹಾಲಿ ಶಾಸಕರಿಗಾಗಿ ಸುಮಾರು 80 ವಾಹನಗಳು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸದಸ್ಯರಿಗಾಗಿ ಸುಮಾರು 40 ವಾಹನಗಳು ಲಭ್ಯವಿವೆ. ಇವುಗಳ ಬಳಕೆಗೆ ಪ್ರತಿ ಕಿಲೋಮೀಟರ್ಗೆ 8 ರೂ.ನಿಂದ 12 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ.
ಕ್ಯಾಶ್ ಲೆಸ್ ವ್ಯವಸ್ಥೆ: ವಾಹನ ಬಳಕೆಯ ಸಂಪೂರ್ಣ ವೆಚ್ಚವನ್ನು ನಗದುರಹಿತ (ಕ್ಯಾಶ್ಲೆಸ್) ವ್ಯವಸ್ಥೆಯ ಮೂಲಕ ಕಡಿತಗೊಳಿಸಲಾಗುತ್ತದೆ. ಹಾಲಿ ಶಾಸಕರಾದರೆ ಅವರ ಮಾಸಿಕ ವೇತನದಿಂದ, ಮಾಜಿ ಶಾಸಕರಾದರೆ ಅವರ ಪಿಂಚಣಿಯಿಂದ ಈ ಮೊತ್ತವನ್ನು ನೇರವಾಗಿ ಕಡಿತ ಮಾಡಲಾಗುತ್ತದೆ.
ಈ ಕಠಿಣ ಕ್ರಮದಿಂದಾಗಿ ಶಾಸಕರಿಗೆ ತಮ್ಮ ಹೆಸರಿನಲ್ಲಿ ಯಾರು ವಾಹನ ಬಳಸಿದ್ದಾರೆ ಎಂಬ ಮಾಹಿತಿ ಸುಲಭವಾಗಿ ತಿಳಿಯಲಿದ್ದು, ವಾಹನ ಹಾಗೂ ಚಾಲಕರ ಕೊರತೆಯನ್ನೂ ನೀಗಿಸಬಹುದಾಗಿದೆ ಎಂದು ವಿಧಾನಸಭೆ ಕಾರ್ಯಾಲಯದ ಮೂಲಗಳು ತಿಳಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























