ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರೌಂಡ್ಸ್

dk shivakumar
27/07/2023

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳ ಸ್ಥಳ ಪರಿಶೀಲನೆ ನಡೆಸಿದರು.

ಮಳೆಯ ನಡುವೆಯೂ ಸರ್ವಜ್ಞ ನಗರದ ಕ್ಷೇತ್ರದ ಸೇವಾನಗರ ಮೇಲ್ಸೇತುವೆ, ಬಾಣಸವಾಡಿ ಕೆರೆ, ಕಚರಕನಹಳ್ಳಿಕೆರೆ ಹಾಗೂ ಹೆಣ್ಣೂರು ಬಂಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ರಾಜ್ಯ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲು ಒಎಂಬಿಆರ್ ಪಂಪ್ ಹೌಸ್ ಗೆ ಭೇಟಿ ನೀಡಿ ಕಾಮಗಾರಿಯ ನೀಲನಕ್ಷೆ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಗತ್ಯ ಸೂಚನೆ ನೀಡಿದರು.

ನಂತರ ಬಾಣಸವಾಡಿ ಕೆರೆಗೆ ಭೇಟಿ ನೀಡಿ ಅದರ ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ಪಡೆದರು. 47 ಎಕರೆ ವಿಸ್ತೀರ್ಣದಲ್ಲಿದ್ದ ಕೆರೆ ಈಗ ಕೆಲವು 17 ಎಕರೆಯಷ್ಟು ಮಾತ್ರ ಕೆರೆಯಾಗಿ ಉಳಿದುಕೊಂಡಿದ್ದು, ಉಳಿದ ಜಾಗ ಲೇಔಟ್ ಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಕೆರೆಯನ್ನು ಅಭಿವೃದ್ಧಿ ಮಾಡಿ ಕೆರೆಯ ಪಕ್ಕ ಉದ್ಯಾನವನ ನಿರ್ಮಾಣ ಮಾಡುತ್ತಿರುವ ಮಾಹಿತಿ ಪಡೆದರು.

ನಂತರ ಕಚರಕನಹಳ್ಳಿ ಕೆರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೆರೆಯ ಸುತ್ತ ಇರುವ ಕೊಳಗೇರಿ ಪ್ರದೇಶವನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಕೆರೆ ಜಾಗ ವಾಪಸ್ ಪಡೆಯಲು ಕೋರ್ಟ್ ನಿಂದ ಆದೇಶ ಬಂದಿದೆ. ಕೊಳಗೇರಿ ಪ್ರದೇಶಗಳಲ್ಲಿ 450 ಕುಟುಂಬಗಳಿವೆ. ಇಲ್ಲಿ ಕೆರೆ ಅಭಿವೃದ್ಧಿ ಮಾಡಿ ಪಕ್ಕದಲ್ಲೇ ವ್ಯೂ ಪಾರ್ಕ್ ಹಾಗೂ ಸ್ಟೇಡಿಯಂ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಈಗ ಸಧ್ಯಕ್ಕೆ ಮೂಲಭೂತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಯೋಜನೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಡಿಪಿಆರ್ ಒಪ್ಪಿಗೆ ಪಡೆಯಲಾಗಿದೆ. ಅವರಿಂದ ಯಾವುದೇ ಅನುದಾನ ಬಂದಿಲ್ಲ. ಇದು ಬಿಬಿಎಂಪಿ ವ್ಯಾಪ್ತಿಗೆ ಬರುವುದರಿಂದ ಮುಂದಿನ ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ಪಾಲಿಕೆಯಿಂದ ವತಿಯಿಂದ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

ಕೊಳಗೇರಿ ನಿವಾಸಿಗಳ ಸ್ಥಳಾಂತರಕ್ಕೆ ಜಾಗ ನೋಡಿದ್ದೀರಾ ಎಂದು ಶಿವಕುಮಾರ್ ಅವರು ಪ್ರಶ್ನಿಸಿದಾಗ, “ಕೆ.ಆರ್ ಪುರಂ ಬಳಿ ಈ ಹಿಂದೆ ಸ್ಥಳೀಯ ಶಾಸಕರ ಜೊತೆ ಮಾತನಾಡಿ ನಾಲ್ಕು ಎಕರೆ ನಿಗದಿ ಮಾಡಿದ್ದೆವು. ಆದರೆ ಈಗ ಅಲ್ಲಿ ಕೇವಲ ಒಂದು ಎಕರೆ ಮಾತ್ರ ಜಾಗ ಉಳಿದಿದೆ. ಸಧ್ಯಕ್ಕೆ ಅದನ್ನು ಪಡೆದು, ಉಳಿದ ಕಡೆ ಮೂರ್ನಾಲ್ಕು ಎಕರೆ ಪಡೆದು ಸ್ಥಳಾಂತರ ಮಾಡಬೇಕು” ಎಂದು ಜಾರ್ಜ್ ಅವರು ಮಾಹಿತಿ ನೀಡಿದರು.

ಹೆಣ್ಣೂರು ಬಂಡೆಗೆ ಭೇಟಿ ನೀಡಿದರು. ಇಲ್ಲಿ 29 ಎಕರೆ ಜಾಗದಲ್ಲಿ ಸ್ವಲ್ಪ ಜಾಗ ಒತ್ತುವರಿಯಾಗಿದೆ. ಉಳಿದ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕಿದೆ ಎಂದು ಸಚಿವರ ಮುಂದೆ ಪ್ರಸ್ತಾವನೆ ಇಟ್ಟರು.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಇಂದು ಸರ್ವಜ್ಞ ನಗರ ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ, ಮೇಲ್ಸೇತುವೆ ನಿರ್ಮಾಣದ ಪರಿಶೀಲನೆ ಮಾಡಿದೆ. ಕೆರೆ ಜಾಗದಲ್ಲಿ ಪಾರ್ಕ್ ನಿರ್ಮಾಣದ ವಿಚಾರವಾಗಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿಂದೆ ಮಂಜೂರಾಗಿದ್ದ ಕಾಮಗಾರಿಗಳನ್ನು ಕಳೆದ ಸರ್ಕಾರ ರದ್ದು ಮಾಡಿತ್ತು. ಈಗ ಮತ್ತೆ ಸರ್ಕಾರಿ ಆಸ್ತಿ ಉಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ತೀರ್ಮಾನ ಮಾಡುವ ಮುನ್ನ ನಾನು ಹಾಗೂ ಸಚಿವರು ಖುದ್ದಾಗಿ ಬಂದು ಪರಿಶೀಲನೆ ಮಾಡಿದ್ದೇವೆ. ಬಿಡಿಎ, ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ದಾಖಲೆ ಪರಿಶೀಲನೆ ಮಾಡಲಾಗಿದೆ. ಶಾಸಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version