‘ಮಸೀದಿ ಅಗೆದರೆ ದೇವಸ್ಥಾನ, ದೇವಸ್ಥಾನ ಅಗೆದರೆ ಬೌದ್ಧ ಸ್ತೂಪ’: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: “ಇತಿಹಾಸವನ್ನು ಆಳವಾಗಿ ಕೆದಕುತ್ತಾ ಹೋದರೆ ನೀವೇ ಸಂಕಷ್ಟಕ್ಕೆ ಸಿಲುಕುತ್ತೀರಿ. ಮಸೀದಿ ಕೆಡವಿದರೆ ಅಲ್ಲಿ ದೇವಾಲಯ ಸಿಗಬಹುದು, ಆದರೆ ಅದೇ ರೀತಿ ದೇವಾಲಯವನ್ನು ಕೆಡವಿದರೆ ಅಲ್ಲಿ ಬೌದ್ಧ ಸ್ತೂಪಗಳು ಸಿಗುತ್ತವೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ನವೀನ್ ಸೂರಿಂಜೆ ಅವರ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 3,500 ವರ್ಷಗಳ ಇತಿಹಾಸವನ್ನು ಉಲ್ಲೇಖಿಸಿ ಈ ಮಾತುಗಳನ್ನು ಆಡಿದರು.
ವೇದ ಕಾಲದ ಬ್ರಾಹ್ಮಣ್ಯದ ಸಂಪ್ರದಾಯ ಹಾಗೂ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಜೈನ ಮತ್ತು ಬೌದ್ಧ ಧರ್ಮಗಳಂತಹ ‘ಶ್ರಮಣ’ ಸಂಪ್ರದಾಯಗಳ ನಡುವಿನ ಐತಿಹಾಸಿಕ ಸಂಘರ್ಷವನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.
ಬ್ರಿಟಿಷರ ವಿರುದ್ಧ ನಾಲ್ಕು ಆಂಗ್ಲೋ–ಮೈಸೂರು ಯುದ್ಧಗಳನ್ನು ಮಾಡಿದ ಟಿಪ್ಪು ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿದರು. “ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡುತ್ತಿದ್ದರೆ, ಅತ್ತ ಆರೆಸ್ಸೆಸ್ (RSS) ಬ್ರಿಟಿಷರ ವಿರುದ್ಧ ಒಂದು ಸಣ್ಣ ಧ್ವನಿಯನ್ನೂ ಎತ್ತಿರಲಿಲ್ಲ” ಎಂದು ಟೀಕಿಸಿದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಹೆಸರೆತ್ತದೆ ವಾಗ್ದಾಳಿ ನಡೆಸಿದ ಸಚಿವರು, “ಬೆಂಗಳೂರಿನ ಲಾಲ್ ಬಾಗ್ ನಿರ್ಮಿಸಿದ್ದು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್. ಟಿಪ್ಪುವನ್ನು ವಿರೋಧಿಸುವ ಆ ಭಾಗದ ಸಂಸದರು ಈಗ ಲಾಲ್ ಬಾಗ್ ಅನ್ನು ಸುಡುತ್ತಾರೆಯೇ?” ಎಂದು ಪ್ರಶ್ನಿಸಿದರು. ಅಲ್ಲದೆ, ಟಿಪ್ಪು ಸುಲ್ತಾನ್ ‘ತೋಟಗಾರಿಕೆಯ ಪಿತಾಮಹ’ ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ ಎಂದು ಅವರು ಪ್ರತಿಪಾದಿಸಿದರು. ಬ್ರಿಟಿಷ್ ಇತಿಹಾಸ ತಜ್ಞರೇ ಟಿಪ್ಪುವಿನ ಹೋರಾಟವನ್ನು ಗುರುತಿಸಿದ್ದಾರೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























