ದೇವದಾಸಿ ಪದ್ಧತಿ ಇನ್ನೂ ಜೀವಂತ: ಮಗಳನ್ನೇ ದೇವದಾಸಿ ಪದ್ಧತಿಗೆ ದೂಡಲು ಯತ್ನ!

16/04/2025

ಬಳ್ಳಾರಿ: 5G ಯುಗದಲ್ಲಿ ನಾವಿದ್ದೇವೆ… ಆದರೂ ಇನ್ನೂ ಕೂಡ ಜಾತಿ, ಲಿಂಗ ಅಸಮಾನತೆ ಹೋಗಿಲ್ಲ. ಇವೆಲ್ಲದರ ನಡುವೆ ಸಾವಿರಾರು ವರ್ಷಗಳಿಂದ ದೇವರ ಹೆಸರಿನಲ್ಲಿ ನಡೆಸಲಾಗುತ್ತಿರುವ ಅನಾಚಾರಗಳು ಇನ್ನೂ ಜೀವಂತವಾಗಿವೆ ಎನ್ನುವುದು ಆಘಾತಕಾರಿಯಾದರೂ ವಾಸ್ತವವಾಗಿದೆ.  ಬಳ್ಳಾರಿ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಹೌದು… ಬಳ್ಳಾರಿ ಜಿಲ್ಲೆಯಲ್ಲಿ ಪೋಷಕರೇ ಬಾಲಕಿಯನ್ನು ದೇವದಾಸಿ ಪದ್ಧತಿಗೆ ದೂಡಲು ಮುಂದಾಗಿದ್ದು, ಘಟನೆಯ ಮಾಹಿತಿ ತಿಳಿದು ಬಳ್ಳಾರಿ ಜಿಲ್ಲೆಯ ಕುರಿಗೋಡು ಪೊಲೀಸರು ಯುವತಿಯನ್ನು ರಕ್ಷಿಸಿ, ಆಕೆ ಪ್ರೀತಿಸುತ್ತಿದ್ದ ಯುವಕನ ಜೊತೆಗೆ ವಿವಾಹ ಮಾಡಿಸುವ ಮೂಲಕ ಅನಿಷ್ಠ ಪದ್ಧತಿಗೆ ಬ್ರೇಕ್ ಹಾಕಿದ್ದಾರೆ.

ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್​ ನ ಯುವತಿ ತನ್ನದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಯುವತಿಯ ತಾಯಿ ಪ್ರೀತಿಯನ್ನು ವಿರೋಧಿಸಿದ್ದರು. ಅಲ್ಲದೇ ನೀನು ಏನಾದರೂ ಆ ಯುವಕನನ್ನ ಮದ್ವೆ ಆದರೆ ದೇವದಾಸಿ ಆಗಬೇಕಾಗುತ್ತದೆ ಅಂತಾ ನಿತ್ಯವೂ ಕಿರುಕುಳ ಕೊಡುತ್ತಿದ್ದರು.  ಯುವತಿ ತಾನು ಪ್ರೀತಿಸಿದ ಯುವಕನ ಕೈ ಹಿಡಿಯಲು ಮುಂದಾಗಿದ್ದರಿಂದು ಬಲವಂತವಾಗಿ ಯುವತಿಗೆ ಮುತ್ತು ಕಟ್ಟಿಸಿ, ದೇವದಾಸಿ ಮಾಡಲು ತಾಯಿ ಯತ್ನಿಸಿದ್ದರು. ಆದರೆ ತಾಯಿಯ ನಡೆಯಿಂದ ಕಂಗೆಟ್ಟಿದ್ದ ಯುವತಿ ದೇವದಾಸಿ ವಿಮೋಚನಾ ಸಂಘಟನೆ ಮೂಲಕ ಠಾಣೆ ಮೆಟ್ಟಿಲೇರಿದ್ದಳು.

ಆಗ ದೇವದಾಸಿ ವಿಮೋಚನಾ ಸಂಘದವರು ಕೂಡಲೇ ಕುರುಗೋಡು ಠಾಣೆಯ ಪಿಎಸ್‌  ಐ ಸುಪ್ರಿತ್ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಪಿಎಸ್ ಐ ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಯಿಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿ ಮನವೊಲಿಸಿದ್ದಾರೆ.  ಬಳಿಕ ಎಲ್ಲರ ಸಮ್ಮುಖದಲ್ಲಿಯೇ ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ.

ಇನ್ನೂ ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಲು ಯತ್ನಿಸಿದ ಪೋಷಕರ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ. ಇಂತಹ ಗಂಭೀರವಾದ ಘಟನೆಗಳು ನಡೆದಾಗ ರಾಜಿ ಇತ್ಯರ್ಥ ಮಾಡುವ ಬದಲು ಪೋಷಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಇದರಿಂದಾಗಿ ಇನ್ನು ಮುಂದೆ ಈ ರೀತಿಯ ಕೃತ್ಯ ನಡೆಸುವವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version