ಡಿಕೆಶಿ ಅಕ್ರಮ ಆಸ್ತಿಗಳಿಕೆ ಪ್ರಕರಣ: ಸಚಿವ ಸಂಪುಟದ ನಿರ್ಧಾರ ಕಾನೂನುಬಾಹಿರ: ವಿಜಯೇಂದ್ರ

vijayendhra
24/11/2023

ಬೆಂಗಳೂರು:  ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸಚಿವಸಂಪುಟ ಕೈಗೊಂಡ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಆಕ್ಷೇಪಿಸಿದರು.

ಇಲ್ಲಿನ ಶಿವಾನಂದ ವೃತ್ತದ ಬಳಿ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಆದಾಗ ಬೆಂಗಳೂರು ಮತ್ತು ದೇಶದ ವಿವಿಧೆಡೆ ಲಭಿಸಿದ ಹಣದ ವಿಷಯ ಎಲ್ಲರಿಗೂ ತಿಳಿದಿದೆ. ತದನಂತರ ಜಾರಿ ನಿರ್ದೇಶನಾಲಯವು (ಇಡಿ) ಕೂಡ ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದೆ ಎಂದು ವಿವರಿಸಿದರು.

ಕ್ಯಾಬಿನೆಟ್ ತೀರ್ಮಾನವು ಸಂಪೂರ್ಣವಾಗಿ ತಪ್ಪು ನಿರ್ಧಾರ ಮತ್ತು ಕಾನೂನುಬಾಹಿರ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಈ ನಿರ್ಧಾರ ದುರದೃಷ್ಟಕರ ಮತ್ತು ಬಿಜೆಪಿ ಈ ನಿರ್ಧಾರವನ್ನು ಖಂಡಿಸುತ್ತದೆ. ಇದು ಕಾನೂನಿನ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್ ಅವರು ಯಾಕಾಗಿ ತನಿಖೆಗೆ ಭಯ ಪಡುತ್ತಾರೆ? ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲವೇ? ತಾವು ಹಲವು ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ಮಾಡುತ್ತ ಬರುತ್ತಿದ್ದೀರಿ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಾಮಾಣಿಕವಾಗಿ ಇದ್ದರೆ ಕ್ಯಾಬಿನೆಟ್ ಕೈಗೊಳ್ಳುವ ಈ ತೀರ್ಮಾವನ್ನು ವಿರೋಧಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಕಾನೂನು ಪ್ರಕ್ರಿಯೆಯ ಮೇಲಿನ ವಿಶ್ವಾಸ ಕಳಕೊಂಡಂತಿದೆ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರವು ಮಾಡಿದ ಕ್ಯಾಬಿನೆಟ್ ತೀರ್ಮಾನವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದ ಅವರು, ಇದರ ವಿರುದ್ಧ ಪಕ್ಷದ ಮುಂದಿನ ಕ್ರಮವನ್ನು ಹಿರಿಯರ ಜೊತೆ ಕುಳಿತು ಚರ್ಚಿಸಿ ಕೈಗೊಳ್ಳುತ್ತೇವೆ ಎಂದು ಪ್ರಕಟಿಸಿದರು.

ಇತ್ತೀಚಿನ ಸುದ್ದಿ

Exit mobile version