ಸಂಸದರನ್ನ ಪ್ರಶ್ನೆ ಮಾಡುವ ಧೈರ್ಯವಿಲ್ಲ, ಬಡಪಾಯಿ ನಟರ ಮೇಲೇಕೆ ಸಮರ?

ಬೆಂಗಳೂರು: ತಮಿಳು ನಟ ಸಿದ್ಧಾರ್ಥ್ ತಮ್ಮ ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಕನ್ನಡ ಸಂಘಟನೆಗಳ ಹೆಸರಿನಲ್ಲಿ ಪತ್ರಿಕಾಗೋಷ್ಠಿಗೆ ತಡೆಯೊಡ್ಡಿದ್ದ ಘಟನೆ ಇದೀಗ ವ್ಯಾಪಕವಾಗಿ ಚರ್ಚೆಗೊಳಗಾಗುತ್ತಿದೆ.
ಕಾವೇರಿ ವಿಚಾರ ಬಂದಾಗ, ಪದೇ ಪದೇ ಕನ್ನಡ ಚಿತ್ರರಂಗದ ನಟರು ಹಾಗೂ ತಮಿಳು ಚಿತ್ರರಂಗದ ನಟರ ಮೇಲೆಯೇ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆದ್ರೆ, ಕಾವೇರಿ ಸಮಸ್ಯೆಯ ಬಗ್ಗೆ ಧ್ವನಿಯೆತ್ತಬೇಕಾಗಿದ್ದ ಸಂಸದರು ಮೌನವಾಗಿದ್ದಾರೆ. ಇವರನ್ನು ಪ್ರಶ್ನೆ ಮಾಡುವ ಬದಲು ಕೆಲವು ಹೋರಾಟಗಾರರು ಕಾವೇರಿ ನೀರಿನ ವಿಚಾರದಲ್ಲಿ ಯಾವುದೇ ತಪ್ಪೇ ಮಾಡದವರನ್ನು ಪ್ರಶ್ನೆ ಮಾಡುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಇಂದು ನಟ ಸಿದ್ಧಾರ್ಥ್ ಅವರ ಪತ್ರಕಾಗೋಷ್ಠಿಗೆ ಕರ್ನಾಟಕದಲ್ಲಿ ತಡೆಯೊಡ್ಡಿರುವುದು, ತಮಿಳುನಾಡಿನಲ್ಲಿ ಭಾರೀ ಚರ್ಚೆಯಾಗುತ್ತಿದೆ. ನಾಳೆ ಕನ್ನಡ ನಟರು ತಮ್ಮ ಚಿತ್ರದ ಪ್ರಮೋಷನ್ ಗೆ ತಮಿಳುನಾಡಿಗೆ ಹೋದಾಗ ಅಲ್ಲಿನ ಸಂಘಟನೆಗಳು ಕೂಡ ಇದೇ ರೀತಿ ಪ್ರತಿರೋಧ ಒಡ್ಡುವುದಿಲ್ಲವೇ?, ಇದೀಗ ಸಿದ್ಧಾರ್ಥ್ ಪತ್ರಿಕಾಗೋಷ್ಠಿಯನ್ನು ತಡೆದವರು ಕನ್ನಡದ ನಟರ ಚಿತ್ರಗಳು ದೇಶ ವ್ಯಾಪಿ ಬಿಡುಗಡೆಯಾಗುವಾಗ ತಮಿಳುನಾಡಿಗೆ ಹೋಗಿ ಕನ್ನಡ ನಟರ ಜೊತೆಗೆ ನಿಂತು ಮಾತನಾಡುವ ಧೈರ್ಯ ತೋರುತ್ತಾರೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಕಾವೇರಿ ವಿಚಾರದಲ್ಲಿ ಮಾತನಾಡಬೇಕಿದ್ದ ಸಂಸದರು ಒಬ್ಬರೂ ಕಾವೇರಿ ವಿಚಾರವಾಗಿ ಪ್ರತಿಕ್ರಿಯಿಸುತ್ತಿಲ್ಲ. ಸಂಸದರನ್ನ ಪ್ರಶ್ನೆ ಮಾಡುವ ಗುಂಡಿಗೆ ಈ ಹೋರಾಟಗಾರರಿಗೆ ಇಲ್ಲವೇ? ತಮಿಳು ನಟ ಸಿದ್ಧಾರ್ಥ್ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಬಂದಿದ್ದು, ಅವರನ್ನು ನಾವು ತಡೆದಿದ್ದೇವೆ ಎಂಬಂತೆ, ವೀರ ಶೌರ್ಯದ ಮಾತುಗಳನ್ನಾಡುತ್ತಿರುವವರು ವಾಸ್ತವವನ್ನ ಮರೆ ಮಾಡಿ, ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿರೋದು ಸರಿಯಲ್ಲ. ನಟ ಶಿವರಾಜ್ ಕುಮಾರ್ ಅವರು ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಲ್ಲದೇ, ಆ ನಟನಿಗೆ ಕ್ಷಮೆ ಯಾಚಿಸಿದ್ದಾರೆ. ಚಿತ್ರರಂಗದ ಕಲಾವಿದರು ಕಾವೇರಿಗೆ ನೀರು ಬಿಡುವವರಲ್ಲ, ರಾಜಕಾರಣಿಗಳನ್ನ ಪ್ರಶ್ನೆ ಮಾಡಬೇಕಾದವರು ತಮ್ಮ ಹೊಟ್ಟೆಪಾಡಿಗೆ ದುಡಿಯುವ ನಟರನ್ನ ಪ್ರಶ್ನೆ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.