‘ಅನ್ನ ಸುವಿಧಾ’ ಸಿದ್ದರಾಮಯ್ಯ ಘೋಷಿಸಿದ ಹೊಸ ಯೋಜನೆ ಏನು ಗೊತ್ತಾ?

ಬೆಂಗಳೂರು: 2024ನೇ ಸಾಲಿನ ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯನವರು ಅನ್ನ ಸುವಿಧಾ ಎನ್ನುವ ಹೊಸ ಯೋಜನೆ ಪ್ರಕಟಿಸಿದ್ದಾರೆ. ಈ ಹೊಸ ಯೋಜನೆ ಬಗ್ಗೆ ಇಲ್ಲಿದೆ ವಿವರ.
ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಅನ್ನ ಸುವಿಧಾ ಯೋಜನೆಯನ್ನು ಅವರು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ. ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಈ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅನ್ನ ಸುವಿಧಾ ಯೋಜನೆಯು ಹೋಮ್ ಡೆಲಿವರಿ ಆ್ಯಪ್ ಮೂಲಕ ಜಾರಿಗೆ ತರಲಾಗುವುದು. ಈ ಯೋಜನೆ ಮೂಲಕ 80 ವರ್ಷ ವಯಸ್ಸು ದಾಟಿದ ವೃದ್ಧರ ಅಥವಾ ವೃದ್ಧೆಯರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ 2024ರ ಜನವರಿ ಅಂತ್ಯದ ವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದೂ ಸಿಎಂ ಬಜೆಟ್ ನಲ್ಲಿ ತಿಳಿಸಿದರು.