ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ, ಭಾರತೀಯರ ಘನತೆಯ ಬದುಕಿನ ರಹದಾರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದು ಭಾರತವು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಂಡ ಶುಭದಿನ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಅಜಾದ್ ಮುಂತಾದ ಕೆಚ್ಚೆದೆಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ದೇಶಾದ್ಯಂತ ಲಕ್ಷಾಂತರ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ 1947ರ ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾತನಾಡಿದ ಅವರು, ದೇಶದ ನಾಳೆಗಳನ್ನು ರೂಪಿಸುವ ಸಲುವಾಗಿ ತಮ್ಮ ಇಂದಿನ ಬದುಕನ್ನೇ ತ್ಯಾಗ ಮಾಡಿದ ಆ ಎಲ್ಲ ಮಹನೀಯರನ್ನು ನಾವು ಇಂದು ಮನದುಂಬಿ ಸ್ಮರಿಸೋಣ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ ಸ್ಮರಣೀಯವಾದುದು. `ಬ್ರಿಟಿಷರ ಕರಾಳ ಕಾನೂನಿನ ವಿರುದ್ಧ ಬಾಲಾಜಿ ನಿಂಬಾಳ್ಕರ್ ಹಾಗೂ ಜಡಗಬಾಲರ ನಾಯಕತ್ವದಲ್ಲಿ ಹೋರಾಡಿದ ಹಲಗಲಿಯ ಬೇಡವೀರರು, ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಬೂದಿ ಬಸಪ್ಪ ನಾಯಕ, ಸುರಪುರದ ವೆಂಕಟಪ್ಪ ನಾಯಕ, ಕೊಡಗಿನ ಸ್ವಾಮಿ ಅಪರಾಂಪರ ಮೊದಲಾದ ಧೀರ ಹೋರಾಟಗಾರರ ಬಲಿದಾನವನ್ನು ನಾವು ಈ ದಿನ ನೆನೆಸಿಕೊಳ್ಳಬೇಕು. ಹಾಗೆಯೇ ಗಾಂಧೀಜಿಯವರ ಕರೆಗೆ ಓಗೊಟ್ಟಿದ್ದ, `ಕರ್ನಾಟಕದ ಸಿಂಹ’ ಗಂಗಾಧರ ರಾವ್ ದೇಶಪಾಂಡೆ,. ಹರ್ಡೀಕರ್ ಮಂಜಪ್ಪ, ಆಲೂರು ವೆಂಕಟರಾವ್ , ಮೈಲಾರ ಮಹಾದೇವಪ್ಪರಂತಹ ದೇಶಪ್ರೇಮಿಗಳು, ದಂಡಿ ಸತ್ಯಾಗ್ರಹದ ಕರೆಗೆ ಓಗೊಟ್ಟು ಕರನಿರಾಕರಣೆ ಮಾಡಿದ ಅಂಕೋಲದ ಸತ್ಯಾಗ್ರಹಿಗಳು, `ಏಸೂರು ಕೊಟ್ಟರೂ ಈಸೂರು ಬಿಡೆವು’ ಎಂದು ಬ್ರಿಟಿಷರಿಗೆ ಸವಾಲು ಹಾಕಿ ಪ್ರಾಣತ್ಯಾಗ ಮಾಡಿದ ಈಸೂರಿನ ಸತ್ಯಾಗ್ರಹಿಗಳು, ಹೀಗೆ ಭಾರತೀಯರ ಉತ್ತಮ ಭವಿಷ್ಯಕ್ಕಾಗಿ ಅಂದು ಹೆಜ್ಜೆ ಹಾಕಿದ ಸಾವಿರ ಸಾವಿರ ಧೀರ ದೇಶಪ್ರೇಮಿ ಕನ್ನಡಿಗರನ್ನು ನಾವು ಈ ದಿನ ತಲೆಬಗ್ಗಿಸಿ ಗೌರವ ಸಲ್ಲಿಸಬೇಕು. ಈ ಮಹನೀಯರ ಹೋರಾಟದ ಫಲವಾದ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯಾನಂತರದ ಈ 79 ವರ್ಷಗಳ ಅವಧಿಯಲ್ಲಿ ವಿವಿಧ ಬಗೆಯ ಗಂಭೀರ ಸವಾಲುಗಳನ್ನು ದೇಶವು ಸಮರ್ಥವಾಗಿ ಎದುರಿಸಿದೆ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದೂರದರ್ಶಿತ್ವ, ವಿಚಾರಶೀಲತೆ, ಪ್ರಜಾಪ್ರಭುತ್ವವಾದಿ ಧೋರಣೆ, ದೃಢ ಜಾತ್ಯತೀತ ನಿಲುವು, ವೈಜ್ಞಾನಿಕ ಚಿಂತನೆಗಳು ನಮ್ಮ ದೇಶದ ಅಸಾಧಾರಣ ಪ್ರಗತಿಗೆ ಅಗತ್ಯವಾದ ಸದೃಢ ತಳಪಾಯವನ್ನು ಹಾಕಿಕೊಟ್ಟಿವೆ. ಅದೇ ರೀತಿ, ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನವು ಈ ದೇಶದ ಜಾತ್ಯತೀತ, ಪ್ರಜಾಸತ್ತಾತ್ಮಕ ಆಶಯಗಳ ಉಸಿರಾಗಿದ್ದು ಪ್ರತಿಯೊಬ್ಬ ಭಾರತೀಯನ ಘನತೆಯ ಬದುಕಿನ ರಹದಾರಿಯಾಗಿದೆ ಎಂದರು.
ಭಾರತದ ಸ್ವಾತಂತ್ರ್ಯವು ಅಖಂಡವಾಗಿಯೂ, ಸಮಗ್ರವಾಗಿಯೂ ಸದಾಕಾಲ ನಳನಳಿಸಬೇಕೆಂದರೆ ನಮ್ಮ ಸಂವಿಧಾನದ ಮೂಲ ತತ್ವಗಳಾದ ಸಾರ್ವಭೌಮತೆ, ಪ್ರಜಾಸತ್ತಾತ್ಮತೆ, ಸಮಾಜವಾದ, ಜಾತ್ಯತೀತತೆ, ಸ್ವತಂತ್ರ ನ್ಯಾಯಾಂಗ, ರಾಜ್ಯ ನಿರ್ದೇಶಕ ತತ್ವಗಳು, ಒಕ್ಕೂಟ ತತ್ವಗಳು ಇದಾವುದೂ ಒಂದಿನಿತೂ ಮುಕ್ಕಾಗದಂತೆ ಎಚ್ಚರವಹಿಸಬೇಕು. ಬ್ರಿಟಿಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ದೇಶವು ಒಗ್ಗೂಡಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು. ಸ್ವಾತಂತ್ರ್ಯ ಚಳವಳಿಯು ನಮ್ಮನ್ನು ಹೇಗೆ ಬ್ರಿಟಿಷರ ಆಳ್ವಿಕೆಯ ಸಂಕೋಲೆಗಳಿಂದ ಬಿಡುಗಡೆಗೊಳಿಸಿತೋ, ಅದೇ ರೀತಿ ಸಂವಿಧಾನವು ನಮ್ಮನ್ನು ಶೋಷಣೆ, ಅಸಮಾನತೆ, ಮೂಲಭೂತವಾದ, ಮತೀಯವಾದ, ಬಡತನಗಳಿಂದ ಮುಕ್ತಗೊಳಿಸುತ್ತದೆ. ಹಾಗಾಗಿ, ಸ್ವಾತಂತ್ರ್ಯ ದಿನಾಚರಣೆಯ ಈ ಶುಭದಿನದಂದು ನಾವೆಲ್ಲರೂ ಸಂವಿಧಾನದ ರಕ್ಷಣೆಯ ಪಣತೊಡೋಣ. ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯ ನಿರ್ದೇಶಕ ತತ್ವಗಳು ಭಾರತವು ಒಂದು ಕಲ್ಯಾಣ ರಾಜ್ಯವಾಗಿ, ಸಾಮಾಜಿಕ – ಆರ್ಥಿಕ ಸಮಾನತೆಯನ್ನು ಸಾಧಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತವೆ. ಸಮಾನ ಅವಕಾಶಗಳು, ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಆಳುವ ಸರ್ಕಾರಗಳು ಭಾರತ ದೇಶವನ್ನು ಸುಖೀ ರಾಜ್ಯವಾಗಿ ವಿಕಸಿತಗೊಳಿಸಬೇಕು ಎನ್ನುವ ಪರಿಕಲ್ಪನೆಯನ್ನು ನೀಡುತ್ತವೆ. ಗಾಂಧೀಜಿಯವರ ಕನಸಿನ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ನಿರ್ದೇಶಕ ತತ್ವಗಳು ಅತ್ಯಂತ ಮಹತ್ವವನ್ನು ಹೊಂದಿವೆ. ಸ್ವಾತಂತ್ರ್ಯವನ್ನು ನಿಜ ಅರ್ಥದಲ್ಲಿ ಸಾಕಾರಗೊಳಿಸುವ ಮಾರ್ಗವನ್ನು ಈ ತತ್ವಗಳು ತೋರುತ್ತವೆ. ಹಾಗಾಗಿಯೇ, ಈ ನಿರ್ದೇಶಕ ತತ್ವಗಳನ್ನು ಸಂವಿಧಾನ ನಿರ್ಮಾತೃವಾದ ಅಂಬೇಡ್ಕರ್ ಅವರು ನಮ್ಮ ಸಂವಿಧಾನದ ಅಪೂರ್ವ ವೈಶಿಷ್ಟ್ಯವೆಂದಿದ್ದರು ಎಂದರು.
ಕರ್ನಾಟಕ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಸಾಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಸಾಕಷ್ಟು ದೂರ ಕ್ರಮಿಸಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ, ರಾಜಕೀಯ ಸಮಾನತೆಯೊಂದರಿಂದಲೇ ದೇಶದ ಪ್ರಗತಿ ಸಾಧ್ಯವಾಗದು. ಅದನ್ನು ಸಾಧಿಸಬೇಕೆಂದರೆ ಸಾಮಾಜಿಕ, ಆರ್ಥಿಕ ಸಮಾನತೆಯು ಅತ್ಯಗತ್ಯ. ಸಂವಿಧಾನದಲ್ಲಿ ಅಡಕವಾಗಿರುವ ಸಮಾಜವಾದಿ ತತ್ವವು ಇದನ್ನೇ ದನಿಸುತ್ತದೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD