ಸರ್ಕಾರಿ ಶಾಲಾ ಮಕ್ಕಳಿಗೆ ವಾರದ 6 ದಿನವೂ ಮೊಟ್ಟೆ: ಅಜೀಂ ಪ್ರೇಮ್‌ ಜೀ ಫೌಂಡೇಷನ್‌ ಸಾಥ್

siddaramaiah
21/07/2024

ಬೆಂಗಳೂರು:  ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಮುಂದೆ ವಾರದ 6 ದಿನವೂ ಮೊಟ್ಟೆ ನೀಡಲು ಸರ್ಕಾರ ಮುಂದಾಗಿದೆ. ಇದೇ ಸಂದರ್ಭದಲ್ಲಿ ಈ ಯೋಜನೆಗೆ ಅಜೀಂ ಪ್ರೇಮ್‌ ಜೀ ಫೌಂಡೇಷನ್‌ 1,500 ಕೋಟಿ ರೂ. ನೆರವು ನೀಡಿದೆ.

ವರದಿಗಳ ಪ್ರಕಾರ, ರಾಜ್ಯ ಸರಕಾರವು ಅಜೀಂ ಪ್ರೇಮ್‌ ಜೀ ಪ್ರತಿಷ್ಠಾನದೊಂದಿಗೆ ಮೂರು ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಫೌಂಡೇಷನ್‌ನ ಸಂಸ್ಥಾಪಕ ಅಜೀಂ ಪ್ರೇಮ್‌ ಜೀ ಅವರು ಒಪ್ಪಂದದ ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಶಾಲಾ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುವುದು ಸರಕಾರದ ಬದ್ಧತೆಯಾಗಿದೆ. ರಾಜ್ಯದ 53,080 ಸರಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 55 ಲಕ್ಷ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲು ಮುಂದೆ ಬಂದಿರುವ ಅಜೀಂ ಪ್ರೇಮ್‌ಜೀ ಅವರದ್ದು ದೊಡ್ಡ ಮನಸ್ಸು. ಪ್ರೇಮ್‌ ಜೀ ಮತ್ತು ಕುಟುಂಬಕ್ಕೆ ಸರಕಾರದ ಪರವಾಗಿ ಧನ್ಯವಾದ. ಇವರು ಇಂತಹ ಅನೇಕ ಜನಪರ ಕೆಲಸಗಳು, ದಾನ-ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.

ಆರೋಗ್ಯ ಉತ್ತಮವಾಗಿದ್ದರೆ, ಪಾಠ-ಪ್ರವಚನ ತಲೆಗೆ ಹತ್ತುತ್ತದೆ. ಆರೋಗ್ಯ ಚೆನ್ನಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ವಾರಕ್ಕೆ 2 ದಿನ ಮೊಟ್ಟೆ, ಚಿಕ್ಕಿ ಬಾಳೆಹಣ್ಣು ನೀಡಲಾಗುತ್ತಿತ್ತು. ಇನ್ನು ಮುಂದೆ ಪ್ರೇಮ್‌ ಜೀ ಫೌಂಡೇಷನ್‌ ನೆರವಿನಿಂದ ವಾರದ ಎಲ್ಲಾ ದಿನವೂ ಪೂರಕ ಪೌಷ್ಟಿಕ ಆಹಾರ ಲಭಿಸಲಿದೆ ಎಂದರು.

ಅಜೀಂ ಪ್ರೇಮ್‌ ಜೀ ಮಾತನಾಡಿ, ನಾವು ಸಾಕಷ್ಟು ಕಾಯಕ್ರಮಗಳನ್ನು ಸರಕಾರದ ಜತೆಗೆ ಹಮ್ಮಿಕೊಂಡು ಬರುತ್ತಿದ್ದೇವೆ. ಇದರಿಂದಾಗಿ ನಮ್ಮ ಮತ್ತು ಸರಕಾರದ ನಡುವೆ 30 ವರ್ಷಗಳ ಬಾಂಧವ್ಯವಿದೆ. ಈಗ ಮತ್ತೊಂದು ಹೊಸ ಯೋಜನೆಯ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆ ಪ್ರಮಾಣ ಉತ್ತಮಗೊಳಿಸುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಮಕ್ಕಳ ಬೆಳವಣಿಗೆ ಮತ್ತು ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಅಜೀಂ ಪ್ರೇಮ್‌ ಜೀ ಪತ್ನಿ ಯಾಸ್ಮೀನ್‌ ಪ್ರೇಮ್‌ ಜೀ, ಶಾಸಕರಾದ ರಿಜ್ವಾನ್‌ ಅರ್ಷದ್‌, ನಜೀರ್‌ ಅಹ್ಮದ್‌, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್‌ ಕುಮಾರ್‌ಸಿಂಗ್‌ ಇತರರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version