ಸರ್ಕಾರ ಉರುಳಿಸಲು ಸಂಚು ಆರೋಪ: ಈಜಿಪ್ಟಿನ ಇಖ್ ವಾನುಲ್ ಮುಸ್ಲಿಮೀನ್ ಸಂಘಟನೆಯ ಮುಖ್ಯಸ್ಥ ಸೇರಿ 8 ಮಂದಿಗೆ ಮರಣದಂಡನೆ

12/03/2024

ಈಜಿಪ್ಟಿನ ಇಖ್ ವಾನುಲ್ ಮುಸ್ಲಿಮೀನ್ ಸಂಘಟನೆಯ ರಾಷ್ಟ್ರೀಯ ಮುಖ್ಯಸ್ಥರಾಗಿದ್ದ ಮೊಹಮ್ಮದ್ ಬದೀ ಸೇರಿದಂತೆ ಸಂಘಟನೆಯ ಎಂಟು ಮಂದಿಗೆ ಈಜಿಪ್ಟಿನ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಈಗಿನ ಸರಕಾರವನ್ನು ಬುಡಮೇಲುಗೊಳಿಸಲು ಸಂಚು ನಡೆಸಿದ್ದಾರೆ ಮತ್ತು 2013ರಲ್ಲಿ ನಡೆದ ಘರ್ಷಣೆಯಲ್ಲಿ ಪಾತ್ರವಹಿಸಿದ್ದಾರೆ ಎಂಬ ಆರೋಪವನ್ನು ಹೊರಿಸಿ ಈ ಶಿಕ್ಷೆಯನ್ನು ಘೋಷಿಸಲಾಗಿದೆ.

2010ರಿಂದ 2013ರವರೆಗೆ ಮುಸ್ಲಿಂ ಬ್ರದರ್ ಹುಡನ್ನು ಮುನ್ನಡೆಸಿದ್ದ ನಾಯಕರು ಕೂಡ ಇವರಲ್ಲಿ ಸೇರಿದ್ದಾರೆ. ಮುಸ್ಲಿಂ ಬ್ರದರ್ ಹುಡ್ ಪಕ್ಷವಾದ ಫ್ರೀಡಂ ಅಂಡ್ ಜಸ್ಟಿಸ್ ಪಾರ್ಟಿಯ ಕಾರ್ಯದರ್ಶಿ, ಸಚಿವ, ಮೊಹಮ್ಮದ್ ಮುರ್ಸಿ ಅವರ ಪರ ಪ್ರಚಾರ ಮಾಡುತ್ತಿದ್ದ ವ್ಯಕ್ತಿ, ಮಾಜಿ ಸಂಸದ ಮುಂತಾದವರು ಗಲ್ಲು ಶಿಕ್ಷೆಗೆ ಈಡಾದವರಲ್ಲಿ ಸೇರಿದ್ದಾರೆ. ಇದೇ ಪ್ರಕರಣದಲ್ಲಿ 37 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದು ಆರು ಮಂದಿಗೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ.

ಇದೇ ವೇಳೆ ಮುಹಮ್ಮದ್ ಬದಿ ಸೇರಿದಂತೆ ಇಖ್ ವಾನುಲ್ ನಲ್ ಮುಸ್ಲಿಮೀನ್ ನ ಎಂಟು ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ತೀವ್ರವಾಗಿ ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಇವರ ಬಿಡುಗಡೆಗೆ ನೆರವಾಗುವಂತೆ ಅವರು ಅಂತಾರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ.

 

 

ಇತ್ತೀಚಿನ ಸುದ್ದಿ

Exit mobile version