ಐಷಾರಾಮಿ ಹೊಟೇಲ್ ಗಳಲ್ಲಿ ಮಸ್ತ್ ಎಂಜಾಯ್: ಬಿಲ್ ಪಾವತಿಸದೇ ಲಕ್ಷ ಲಕ್ಷ ವಂಚನೆ ಮಾಡಿದ ಮಾಜಿ ಕ್ರಿಕೆಟಿಗ ಅರೆಸ್ಟ್

ತಾಜ್ ಪ್ಯಾಲೇಸ್ ಸೇರಿದಂತೆ ಅನೇಕ ಐಷಾರಾಮಿ ಹೋಟೆಲ್‌ಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ 25 ವರ್ಷದ ಮಾಜಿ ಕ್ರಿಕೆಟಿಗನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೃಣಂಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಜುಲೈ 2022 ರಲ್ಲಿ ದೆಹಲಿಯ ತಾಜ್ ಪ್ಯಾಲೇಸ್ ಗೆ 5.5 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ. ಅಲ್ಲದೇ ಆರೋಪಿತ ಸಿಂಗ್ 2020 ಮತ್ತು 2021 ರ ನಡುವೆ ಕ್ರಿಕೆಟಿಗ ರಿಷಭ್ ಪಂತ್ ಗೆ 1.63 ಕೋಟಿ ರೂ.ಗಳನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಮೃಣಂಕ್ ಸಿಂಗ್ ಅವರು ಹರಿಯಾಣ ಅಂಡರ್ -19 ತಂಡದ ಪರ ಆಡಿದ್ದರು. ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೆಸರು ಹೇಳಿಕೊಂಡು ಐಷಾರಾಮಿ ಹೋಟೆಲ್‌ಗಳಿಗೆ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 2022 ರಲ್ಲಿ ತಾಜ್ ಪ್ಯಾಲೇಸ್ ದೆಹಲಿಯ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಿದ ದೂರಿನ ಪ್ರಕಾರ, ಮೃಣಂಕ್ ಸಿಂಗ್ ಕಳೆದ ವರ್ಷ ಜುಲೈನಲ್ಲಿ ಒಂದು ವಾರ ಹೋಟೆಲ್ ನಲ್ಲಿ ಉಳಿದುಕೊಂಡು 5,53,362 ರೂ.ಗಳ ಬಿಲ್ ಪಾವತಿಸದೆ ಹೊರಟುಹೋಗಿದ್ದರು. ಬಿಲ್ ಪಾವತಿಸುವಂತೆ ಕೇಳಿದಾಗ, ಮೃಣಾಂಕ್ ಸಿಂಗ್ ಅವರು ತನಗೆ ಅಡಿಡಾಸ್ ಪ್ರಾಯೋಜಕತ್ವ ನೀಡುತ್ತಿದ್ದು ಅವರೇ ಪಾವತಿ ಮಾಡುತ್ತದೆ ಎಂದು ಹೇಳಿದ್ದರು ಎಂದು ಬಯಲಾಗಿದೆ.