ಖಾಸಗಿ ಚಿತ್ರ, ವಿಡಿಯೋ ವೈರಲ್ ಮಾಡಿದರೆ ಎಫ್ಐಆರ್ ಕಡ್ಡಾಯ: ರಾಜ್ಯ ಡಿಜಿ-ಐಜಿಪಿ ಖಡಕ್ ಆದೇಶ
ಬೆಂಗಳೂರು: ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಹಾಗೂ ವೈರಲ್ ಮಾಡುವ ವಿಕೃತಿಗಳಿಗೆ ಬ್ರೇಕ್ ಹಾಕಲು ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಅವರು ಎಲ್ಲಾ ಪೊಲೀಸ್ ಠಾಣೆಗಳಿಗೆ ಕಡ್ಡಾಯವಾಗಿ ಎಫ್ ಐಆರ್ (FIR) ದಾಖಲಿಸುವಂತೆ ಕಟ್ಟುನಿಟ್ಟಿನ ಆದೇಶ ಮತ್ತು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ಸಂತ್ರಸ್ತರು ಆರಂಭದಲ್ಲಿ ಖಾಸಗಿ ದೃಶ್ಯಗಳ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ನೀಡಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುವಂತಿಲ್ಲ ಅಥವಾ ವಿಳಂಬ ಮಾಡುವಂತಿಲ್ಲ. ಚಿತ್ರೀಕರಣದ ಒಪ್ಪಿಗೆಗೂ, ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಒಪ್ಪಿಗೆಗೂ ವ್ಯತ್ಯಾಸವಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇಂತಹ ಪ್ರಕರಣಗಳನ್ನು ಸಂಜ್ಞೆಯ ಅಪರಾಧ (Cognizable Offense) ಎಂದು ಪರಿಗಣಿಸಬೇಕು. ಬ್ಲಾಕ್ಮೇಲ್, ಸೆಕ್ಸ್ಟೋರ್ಷನ್ ಮತ್ತು ರಿವೆಂಜ್ ಪೋರ್ನೋಗ್ರಫಿ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 77 (ಗೌಪ್ಯತೆ ಉಲ್ಲಂಘನೆ) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ) ಅಡಿಯಲ್ಲಿ ತಕ್ಷಣವೇ ಎಫ್ ಐಆರ್ ದಾಖಲಿಸಬೇಕು.
ಅಪರಾಧ ನಡೆದಿರುವ ಸ್ಥಳವು ಸ್ಥಳೀಯ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರದೇ ಇದ್ದಲ್ಲಿ, ತಕ್ಷಣವೇ ‘ಝೀರೋ ಎಫ್ಐಆರ್’ ದಾಖಲಿಸಿಕೊಂಡು ಬಳಿಕ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಬೇಕು.
ಸಂತ್ರಸ್ತರ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡಬೇಕು. ದೂರುದಾರರನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಿಕೊಳ್ಳಬೇಕು ಮತ್ತು ಯಾವುದೇ ರೀತಿಯ ಅವಮಾನ ಎದುರಾಗದಂತೆ ನೋಡಿಕೊಳ್ಳಬೇಕು. ಸಂತ್ರಸ್ತರು ಮಹಿಳೆಯಾಗಿದ್ದರೆ, ಅವರ ದೂರನ್ನು ಕಡ್ಡಾಯವಾಗಿ ಮಹಿಳಾ ಪೊಲೀಸ್ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು.
ಇಂಟರ್ನೆಟ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಆಕ್ಷೇಪಾರ್ಹ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ (Social Media Platforms) ತುರ್ತು ನೋಟಿಸ್ ನೀಡಬೇಕು.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು ಮತ್ತು ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯ ಸಾಧಿಸಿ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು.
ಪೊಲೀಸರು ಈ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದರೆ ಅಥವಾ ದೂರು ದಾಖಲಿಸಲು ವಿಳಂಬ ಮಾಡಿದರೆ ಅವರ ವಿರುದ್ಧ ಸೂಕ್ತ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























