ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 10 ಸಾವು, ಪರಿಹಾರ ಘೋಷಿಸಿದ ಪ್ರಧಾನಿ ಮೋದಿ, ಸಿಎಂ ಸ್ಟಾಲಿನ್

ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಭೀಕರ ದುರಂತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಇಬ್ಬರು ರಾಜ್ಯ ಸಚಿವರನ್ನು ಕಳುಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಫೋಟದಲ್ಲಿ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ಗಳ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ ಎಫ್) ಘೋಷಿಸಿದ್ದಾರೆ.
ವೆಂಬಕೊಟ್ಟೈನ ಕುಂಡೈರುಪ್ಪು ಗ್ರಾಮದಲ್ಲಿರುವ ಪಟಾಕಿ ಘಟಕದ ರಾಸಾಯನಿಕ ಮಿಶ್ರಣ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯ ಕಂದಾಯ ಸಚಿವ ಕೆ.ಕೆ.ಎಸ್.ಎಸ್.ಆರ್.ರಾಮಚಂದ್ರನ್ ಮತ್ತು ಕಾರ್ಮಿಕ ಸಚಿವ ಸಿ.ವಿ.ಗಣೇಶನ್ ಅವರು ತಕ್ಷಣ ಸ್ಥಳಕ್ಕೆ ತಲುಪಿ ಪರಿಹಾರ ಪ್ರಯತ್ನಗಳನ್ನು ಸಮನ್ವಯಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಧಾನಿ ಕಚೇರಿ (ಪಿಎಂಒ)ಯು ತನ್ನ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, “ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳಿವೆ.
ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ಪಿಎಂಎನ್ಆರ್ ಎಫ್ ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 2 ಲಕ್ಷ ರೂ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಘೋಷಿಸಲಾಗಿದೆ ಅಂದರು.