ಕಾಡಿಗೆ ಬಿದ್ದ ಬೆಂಕಿ: ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಕಾರ್ಕಳ: ತಾಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ ಎಂಬಲ್ಲಿ ಕಾಡು ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಇಲ್ಲಿನ ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.
ಕಾಡು ಪ್ರದೇಶಕ್ಕೆ ಬೆಂಕಿ ಬಿದ್ದು ವ್ಯಾಪಿಸುತ್ತಿರುವ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪಿದರೂ, ಕಾಡು ಪ್ರದೇಶವಾಗಿರುವ ಕಾರಣ ಬೆಂಕಿ ಹೊತ್ತಿಕೊಂಡ ಪ್ರದೇಶಕ್ಕೆ ವಾಹನ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಅಗ್ನಿಶಾಮಕದಳದ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಈ ವೇಳೆ ದೃತಿಗೆಡದ ಸ್ಥಳೀಯರು, ಯುವಕರು, ಯುವತಿಯರು, ಮಹಿಳೆಯರು ಸೇರಿದಂತೆ ಗಿಡಗಳ ರೆಂಬೆಗಳಿಂದ ಬೆಂಕಿ ನಂದಿಸಲು ಯತ್ನಿಸಿದರು. ಕೊಡಗಳಲ್ಲಿ ನೀರು ತಂದು ಬೆಂಕಿ ಹೆಚ್ಚು ವ್ಯಾಪಿಸುತ್ತಿರುವ ಪ್ರದೇಶಗಳಿಗೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.
ಇನ್ನೂ ರಾತ್ರಿಯಾದರೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಲೇ ಇತ್ತು, ಆದರೆ ಸ್ಥಳೀಯರು ಸುಮ್ಮನೆ ಕೂರದೇ ಸಂಪೂರ್ಣವಾಗಿ ಬೆಂಕಿ ಆರುವವರೆಗೂ ಬೆಂಕಿ ನಂದಿಸುತ್ತಲೇ ಇದ್ದರು. ಹೀಗಾಗಿ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಬೆಂಕಿ ವ್ಯಾಪಕವಾಗಿ ವ್ಯಾಪಿಸಿದ್ದರೆ, ಸ್ಥಳೀಯರ ಮನೆಗಳು ಹಾಗೂ ಕಾಡು ಪ್ರಾಣಿಗಳು, ಇತರ ಜೀವಿಗಳಿಗೆ ಹಾನಿಯಾಗುತ್ತಿತ್ತು. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97