ಬಿಜೆಪಿಗೆ ತಲೆಬೇನೆ: ಮೆಹ್ಸಾನಾ ಲೋಕಸಭಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದ ಗುಜರಾತ್ ಮಾಜಿ ಸಿಎಂ ನಿತಿನ್ ಪಟೇಲ್

03/03/2024

ಮೆಹ್ಸಾನಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿತಿನ್ ಪಟೇಲ್ ಅವರು ಭಾನುವಾರ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯಿಂದ ಕೆಳಗಿಳಿಯುವ ಪ್ರವೃತ್ತಿ ಮುಂದುವರೆದಿದೆ. ಪಟೇಲ್ ತಮ್ಮ ನಿರ್ಧಾರವನ್ನು ‘ಎಕ್ಸ್’ ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಗೌತಮ್ ಗಂಭೀರ್, ಜಯಂತ್ ಸಿನ್ಹಾ ಮತ್ತು ಹರ್ಷವರ್ಧನ್ ಸೇರಿದಂತೆ ಇತರ ಬಿಜೆಪಿ ಸಂಸದರು ಇತ್ತೀಚೆಗೆ ಚುನಾವಣಾ ರಾಜಕೀಯ ಜವಾಬ್ದಾರಿಗಳಿಂದ ಹೊರಗುಳಿದ ನಂತರ ಮತ್ತೊಂದು ಬೆಳವಣಿಗೆ ನಡೆದಿದೆ.

ರಾಜ್ಯದ 15 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆದರೆ ಮೆಹ್ಸಾನಾ ಲೋಕಸಭಾ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ನಿತಿನ್ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಪ್ರಸ್ತುತ ಬಿಜೆಪಿ ಸಂಸದ ಹರ್ಷವರ್ಧನ್ ಅವರು ರಾಜಕೀಯದಿಂದ ನಿವೃತ್ತರಾಗುವ ಕುರಿತು ಹೇಳಿಕೊಂಡಿದ್ದಾರೆ. ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಯಾಕೆಂದರೆ ಈ ಪಟ್ಟಿಯಲ್ಲಿ ಹರ್ಷವರ್ಧನ್ ಹೆಸರು ಇರಲಿಲ್ಲ.

ಮಾಜಿ ಕ್ರಿಕೆಟಿಗ ಮತ್ತು ಪೂರ್ವ ದೆಹಲಿಯ ಸಂಸದ ಗೌತಮ್ ಗಂಭೀರ್ ಶನಿವಾರ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ಟ್ವೀಟ್ ಮೂಲಕ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಇದರ ನಂತರ ಜಾರ್ಖಂಡ್ ನ ಹಜಾರಿಬಾಗ್ ಸಂಸದ ಜಯಂತ್ ಸಿನ್ಹಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು.

16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳಲ್ಲಿ 195 ವ್ಯಕ್ತಿಗಳನ್ನು ಒಳಗೊಂಡ ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶನಿವಾರ ಸಂಜೆ ಪ್ರಕಟಿಸಿತ್ತು. 195 ಅಭ್ಯರ್ಥಿಗಳಲ್ಲಿ 107 ಹಿಂದುಳಿದ ಸಮುದಾಯಗಳಿಗೆ ಸೇರಿದವರಿದ್ದಾರೆ. ಇದರಲ್ಲಿ 27 ಪರಿಶಿಷ್ಟ ಜಾತಿಗಳು, 18 ಪರಿಶಿಷ್ಟ ಪಂಗಡಗಳು ಮತ್ತು 57 ಇತರ ಹಿಂದುಳಿದ ವರ್ಗಗಳು (ಒಬಿಸಿ) ಸೇರಿವೆ. ಈ ಪಟ್ಟಿಯಲ್ಲಿ 28 ಮಹಿಳಾ ಅಭ್ಯರ್ಥಿಗಳು ಇದ್ದಾರೆ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 47 ಅಭ್ಯರ್ಥಿಗಳು ಸೇರಿದ್ದಾರೆ. ಕೇರಳದ ಮಲಪ್ಪುರಂನಿಂದ ಸ್ಪರ್ಧಿಸಲು ಮುಸ್ಲಿಂ ಅಭ್ಯರ್ಥಿ ಅಬ್ದುಲ್ ಸಲಾಂ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version