ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ, ಅಮೂಲ್ಯ ಜೀವ ಬಲಿದಾನದ ಫಲವಾಗಿದೆ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ ಲಕ್ಷಾಂತರ ಭಾರತೀಯರ ಅಮೂಲ್ಯ ಜೀವ ಬಲಿದಾನದ ಫಲವಾಗಿದೆ. ಸ್ವಾತಂತ್ರ್ಯ ಯೋಧರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಅವರ ಕುಟುಂಬಕ್ಕೆ ನಾವು ಸದಾ ಚಿರಋಣಿಯಾಗಿ ಇರಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ಇಂದು ಬೆಳಿಗ್ಗೆ ಗಂಟೆಗೆ ವಿಧಾನಸೌಧ ಪೂರ್ವ ಭಾಗದ ಭವ್ಯ ಮೆಟ್ಟಲುಗಳ (ಗ್ರಾಂಡ್ ಸ್ಟೆಪ್) ಮುಂಭಾಗದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,
ಕಳೆದ 77 ವರ್ಷಗಳಿಂದ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಹೊಂದುವ ಮೂಲಕ ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ವಿಶ್ವಗುರು ಆಗುವಲ್ಲಿ ದಾಪುಗಾಲು ಇಡುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ.
ಇಡೀ ಜಗತ್ತು ಭಾರತದತ್ತ ನೋಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ. ದೇಶ ಕಟ್ಟುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಸಾಕಷ್ಟು ಹಿರಿಯರ ಶ್ರಮದಿಂದ ಹಾಗೂ ಲಕ್ಷಾಂತರ ಜನರ ಬಲಿದಾನದಿಂದ ನಮಗೆಲ್ಲ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಎನ್ನುವುದು ಬಹುದೊಡ್ಡ ಆಸ್ತಿ .ಅದು ಒಮ್ಮೆ ಕಳೆಯಿತೆಂದರೆ ಮರಳಿ ಪಡೆಯಲು ಅದರ ಹತ್ತರಷ್ಟು ಬೆಲೆ ಕಟ್ಟಬೇಕಾಗುತ್ತದೆ. ಅದರ ಮೌಲ್ಯ ಅರಿತು ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ದೇಶಾಭಿಮಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತ ಕಟ್ಟುವತ್ತ ಸಂಕಲ್ಪ ಮಾಡೋಣ ಎಂದು ಹೊರಟ್ಟಿ ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ 8.30 ಗಂಟೆಗೆ ಶಾಸಕರ ಭವನದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.
ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ, ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನ ಪರಿಷತ್ತಿನ ಅಪರ ಕಾರ್ಯದರ್ಶಿ ಎಸ್ ನಿರ್ಮಲ, ಸಭಾಪತಿಗಳ ಆಪ್ತ ಕಾರ್ಯದರ್ಶಿ ಶೈಲಾ ಕೆ .ಡಿ, ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ ವಾಳ್ವೇಕರ್. ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿ ವೃಂದದವರು ಹಾಜರಿದ್ದರು.