ಮದುವೆಯಾಗ ಬೇಕಿದ್ದವನೇ ಕೊಲೆಗಾರ!: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

dharwad
23/01/2026

ಧಾರವಾಡ: ನಗರದ ಹೊರವಲಯದಲ್ಲಿ ಇತ್ತೀಚೆಗೆ ನಡೆದಿದ್ದ 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಎಂಬುವವರ ಭೀಕರ ಹತ್ಯೆ ಪ್ರಕರಣವನ್ನು ಧಾರವಾಡ ಪೊಲೀಸರು ಭೇದಿಸಿದ್ದಾರೆ. ವಿದ್ಯಾರ್ಥಿನಿಯ ದೀರ್ಘಕಾಲದ ಸ್ನೇಹಿತ ಹಾಗೂ ಆಕೆಯನ್ನು ಮದುವೆಯಾಗಬೇಕಿದ್ದ ಸಬೀರ್ ಮುಲ್ಲಾ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಏನಿದು ಘಟನೆ? ಗಾಂಧಿ ಚೌಕ್ ನಿವಾಸಿಯಾಗಿದ್ದ ಝಕಿಯಾ, ಇತ್ತೀಚೆಗಷ್ಟೇ ಪ್ಯಾರಾಮೆಡಿಕಲ್ ಕೋರ್ಸ್ ಪೂರ್ಣಗೊಳಿಸಿದ್ದರು. ಮಂಗಳವಾರ ಸಂಜೆ ಕೆಲಸದ ನಿಮಿತ್ತ ಹೊರಹೋದ ಅವರು ಮನೆಗೆ ಮರಳಿರಲಿಲ್ಲ. ಬುಧವಾರ ಬೆಳಗ್ಗೆ ಮನ್ಸೂರ್ ರಸ್ತೆಯ ಕೃಷಿ ಹೊಲವೊಂದರಲ್ಲಿ ಅವರ ಶವ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರನ್ನೇ ದಾರಿ ತಪ್ಪಿಸಲು ಯತ್ನಿಸಿದ ಆರೋಪಿ: ಕೊಲೆ ಮಾಡಿದ ಬಳಿಕ ಆರೋಪಿ ಸಬೀರ್ ಅತ್ಯಂತ ಚಾಣಾಕ್ಷತನದಿಂದ ವರ್ತಿಸಿದ್ದ. ಮೊದಲು ಧಾರವಾಡ ಶಹರ ಠಾಣೆಗೆ ತೆರಳಿ ‘ಝಕಿಯಾ ನಾಪತ್ತೆಯಾಗಿದ್ದಾಳೆ, ಹುಡುಕಿಕೊಡಿ’ ಎಂದು ದೂರು ನೀಡಿದ್ದ. ಅಷ್ಟೇ ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಾನೇ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದನು. ಪೊಲೀಸರು ಸ್ಥಳಕ್ಕೆ ಬಂದಾಗಲೂ ಏನೂ ಅರಿಯದವನಂತೆ ನಟಿಸುತ್ತಾ ಅಲ್ಲೇ ಇದ್ದನು.

ಸಿಕ್ಕಿಬಿದ್ದಿದ್ದು ಹೇಗೆ? ಆರೋಪಿಯ ಅತಿಯಾದ ನಟನೆ ಮತ್ತು ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು, ಮೊಬೈಲ್ ಫೋನ್ ಟ್ರ್ಯಾಕಿಂಗ್ ಮತ್ತು ತಾಂತ್ರಿಕ ಕಣ್ಗಾವಲಿನ ಮೂಲಕ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಝಕಿಯಾ ಮತ್ತು ಸಬೀರ್ ಕಳೆದ ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಭವಿಷ್ಯದ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ. ಜನವರಿ 20ರ ಸಂಜೆ ಮಾತುಕತೆ ವಿಕೋಪಕ್ಕೆ ಹೋಗಿ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಪ್ರಸ್ತುತ ಧಾರವಾಡ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version