4:17 PM Saturday 7 - February 2026

ಗಾಂಧೀಜಿಗೆ ದೇಶದ ಐಕ್ಯತೆ ಮುಖ್ಯವಾಗಿತ್ತು, ನೆಹರೂಗೆ ಅಧಿಕಾರ ದಾಹವಿತ್ತು:  ರಾಮ್ ಮಾಧವ್ ವಿಶ್ಲೇಷಣೆ

nehru with gandhi
07/02/2026

ನವದೆಹಲಿ: ಭಾರತದ ವಿಭಜನೆಗೆ ಮಹಾತ್ಮ ಗಾಂಧೀಜಿ ಕಾರಣ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ಮುಖಂಡ ಮತ್ತು ಇಂಡಿಯಾ ಫೌಂಡೇಶನ್ ಅಧ್ಯಕ್ಷ ರಾಮ್ ಮಾಧವ್, ದೇಶದ ವಿಭಜನೆಗೆ ಜವಾಹರಲಾಲ್ ನೆಹರೂ ಅವರ ಅಧಿಕಾರದ ಹಪಾಹಪಿಯೇ ಕಾರಣ ಎಂದು ಗಂಭೀರವಾಗಿ ವಿಶ್ಲೇಷಿಸಿದ್ದಾರೆ.

ಇಂಡಿಯನ್ ಎಕ್ಸ್‌’ಪ್ರೆಸ್‌’ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ಅವರು ಕಾಂಗ್ರೆಸ್ ವಕ್ತಾರರ ಟೀಕೆಗಳಿಗೆ ಉತ್ತರಿಸುತ್ತಾ, ಇತಿಹಾಸದ ಕೆಲವು ಪ್ರಮುಖ ಘಟನೆಗಳನ್ನು ನೆನಪಿಸಿದ್ದಾರೆ. ಅವರ ಲೇಖನದ ಪ್ರಮುಖಾಂಶಗಳು ಇಲ್ಲಿವೆ:

ಗಾಂಧಿ–ನೆಹರೂ ನಡುವಿನ ಭಿನ್ನಾಭಿಪ್ರಾಯ: ಗಾಂಧೀಜಿಯವರು ಕೊನೆಯ ಕ್ಷಣದವರೆಗೂ ದೇಶ ವಿಭಜನೆಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ನೆಹರೂ ಅವರಿಗೆ ದೇಶದ ಐಕ್ಯತೆಗಿಂತಲೂ ರಾಜಕೀಯ ಅಧಿಕಾರವನ್ನು ಪಡೆಯುವುದು ಮುಖ್ಯವಾಗಿತ್ತು. ನೆಹರೂ ಅವರು ಗಾಂಧೀಜಿಯವರ ಸಿದ್ಧಾಂತಗಳನ್ನು ಪೂರ್ಣವಾಗಿ ಒಪ್ಪುತ್ತಿರಲಿಲ್ಲ, ಕೇವಲ ಗಾಂಧೀಜಿಯವರ ರಾಜಕೀಯ ಬೆಂಬಲ ಪಡೆಯಲು ಅವರೊಂದಿಗೆ ಗುರುತಿಸಿಕೊಂಡಿದ್ದರು ಎಂದು ಮಾಧವ್ ವಾದಿಸಿದ್ದಾರೆ.

ಪಟೇಲರನ್ನು ಬದಿಗೊತ್ತಿದ ನೆಹರೂ: 1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ, 15ರಲ್ಲಿ 12 ಪ್ರದೇಶ ಕಾಂಗ್ರೆಸ್ ಸಮಿತಿಗಳು (PCC) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಸೂಚಿಸಿದ್ದವು. ಆದರೆ ನೆಹರೂ ಅವರು ತಾವೇ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದರು. ಗಾಂಧೀಜಿಯವರು ಸೂಚನೆ ನೀಡಿದರೂ ನೆಹರೂ ಹಿಂದೆ ಸರಿಯಲಿಲ್ಲ, ಅಂತಿಮವಾಗಿ ಪಟೇಲರು ಹಿಂದೆ ಸರಿಯಬೇಕಾಯಿತು. ಆ ಮೂಲಕ ನೆಹರೂ ಮಧ್ಯಂತರ ಸರ್ಕಾರದ ಪ್ರಧಾನಿಯಾಗುವ ಹಾದಿ ಸುಗಮವಾಯಿತು.

ವಿಭಜನೆಗೆ ಕಾರಣವಾದ ನೆಹರೂ ಹೇಳಿಕೆ: 1946ರ ಕ್ಯಾಬಿನೆಟ್ ಮಿಷನ್ ಯೋಜನೆಯನ್ನು ಕಾಂಗ್ರೆಸ್ ಸಮಿತಿ ಒಪ್ಪಿಕೊಂಡಿತ್ತು. ಇದು ದೇಶ ವಿಭಜನೆಯನ್ನು ತಡೆಯುವ ಅವಕಾಶ ಹೊಂದಿತ್ತು. ಆದರೆ ನೆಹರೂ ಅವರು ಏಕಪಕ್ಷೀಯವಾಗಿ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆಯು ಮುಸ್ಲಿಂ ಲೀಗ್ ನಾಯಕ ಮೊಹಮ್ಮದ್ ಅಲಿ ಜಿನ್ನಾಗೆ ಯೋಜನೆಯಿಂದ ಹಿಂದೆ ಸರಿಯಲು ಮತ್ತು ವಿಭಜನೆಗೆ ಹಠ ಹಿಡಿಯಲು ನೆಪವಾಯಿತು ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಗಾಂಧೀಜಿಯವರ ಒಂಟಿ ಹೋರಾಟ: ವಿಭಜನೆಯ 1947ರ ಜೂನ್ 3ರ ಯೋಜನೆಯನ್ನು ನೆಹರೂ ಮತ್ತು ಇತರ ನಾಯಕರು ಆತುರದಿಂದ ಒಪ್ಪಿಕೊಂಡರು. ಆದರೆ ಗಾಂಧೀಜಿಯವರು ಇದನ್ನು ವಿರೋಧಿಸಿದ್ದರು. ಕೊನೆಗೆ ಅನಿವಾರ್ಯವಾಗಿ ಗಾಂಧೀಜಿಯವರು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸಬೇಕಾಯಿತು.

“ಗಾಂಧೀಜಿಯವರು ದೇಶವನ್ನು ಒಂದಾಗಿಡಲು ಬಯಸಿದ್ದರು, ಆದರೆ ನೆಹರೂ ಅವರು ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಹಿಡಿಯುವ ಆತುರದಲ್ಲಿದ್ದರು. ಇದೇ ದೇಶದ ವಿಭಜನೆಗೆ ಕಾರಣವಾಯಿತು” ಎಂದು ರಾಮ್ ಮಾಧವ್ ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version