ಸ್ಥಳೀಯ ಪತ್ರಿಕೆಗಳ ಉಳಿವಿಗೆ ಸರಕಾರ ಕ್ರಮಕೈಗೊಳ್ಳಲಿ : ಸುಭಾಷ್ ಬಣಗಾರ್

subash banagara
19/07/2024

ಔರಾದ್ : ಸ್ಥಳೀಯ ಪತ್ರಿಕೆಗಳ ಉಳಿವಿಗೆ ಸರಕಾರ ಅನುಕೂಲ ಮಾಡಿಕೊಡಬೇಕು ಆಗ ಮಾತ್ರ ಗಡಿ ಭಾಗದಲ್ಲಿ ಕನ್ನಡ ಜೀವಂತವಾಗಿರಲು ಸಾಧ್ಯ ಎಂದು ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಸುಭಾಷ್ ಬಣಗಾರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಬೀದರ್ ಜಿಲ್ಲೆ ಗಡಿ ಭಾಗದ ಜಿಲ್ಲೆಯಾಗಿದೆ. ಇಲ್ಲಿ ಮರಾಠಿ, ಉರ್ದು ಭಾಷೆಗಳ ಪ್ರಭಾವವಿದ್ದರೂ, ಕನ್ನಡ ಭಾಷೆ ಉಳಿಯಲು ಇಲ್ಲಿಯ ಸ್ಥಳೀಯ ಪತ್ರಿಕೆಗಳ ಕಾರ್ಯ ಮಹತ್ವದಾಗಿದೆ ಎಂದರು.

ಸಣ್ಣಪತ್ರಿಕೆಗಳು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನೈಜವಾಗಿ ಬರೆದು ಜನಪ್ರತಿನಿಧಿಗಳನ್ನು ಎಚ್ಚರಿಸಬೇಕು. ಸ್ಥಳೀಯ ಪತ್ರಿಕೆಗಳನ್ನು ನಡೆಸುವುದು ತ್ರಾಸದಾಯಕವಾಗಿದೆ. ಜನರು ಸ್ಥಳೀಯ ಪತ್ರಿಕೆಗಳ ಚಂದಾದಾರರಾಗಿ ಪ್ರೋತ್ಸಾಹ ನೀಡಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಮಾಣಿಕಸಿಂಗ್ ಠಾಕೂರ್ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರತಿ ವರ್ಷ ರಾಜ್ಯ ಮಟ್ಟದ ಸಮ್ಮೇಳನ ನಡೆಸಲಾಗುತ್ತದೆ. ಅಲ್ಲದೇ ಪತ್ರಕರ್ತರಿಗಾಗಿ ನಾನಾ ಯೋಜನೆಗಳೂ ಹಾಕಿಕೊಂಡಿದೆ. ಪತ್ರಕರ್ತರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದೆ ಎಂದರು.

ಸರಕಾರದಿಂದ ಸಂಘ ಸದಸ್ಯರಿಗೆ ನಾನಾ ರೀತಿಯ ಪರಿಹಾರ ಕಲ್ಪಿಸಲಾಗಿದೆ. ಅಲ್ಲದೇ ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ ಮೃತಪಟ್ಟಿರುವ 47 ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ಸರಕಾರದಿಂದ ಪರಿಹಾರ ಕಲ್ಪಿಸಿಕೊಟ್ಟಿದೆ ಎಂದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಗೆ ಕಳೆದ 30 ವರ್ಷಗಳಿಂದ ಹೋರಾಟ ಮಾಡಿದ್ದು, ಶೀಘ್ರವೇ ಎಲ್ಲ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ 8 ಸಾವಿರಕ್ಕೂ ಅಧಿಕ ಸಂಘದ ಸದಸ್ಯರಿದ್ದು, 93 ವರ್ಷದ ಇತಿಹಾಸವಿದೆ ಎಂದರು. ರಾಜ್ಯ ಕಿರಿಟವಾದ ಔರಾದ್ ತಾಲೂಕು ಕೆಂದ್ರದಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿದ್ದು ಶ್ಲಾಘನೀಯ ಎಂದರು.

ವರದಿ: ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version