ನಾವು ಒತ್ತೆಯಾಳುಗಳನ್ನು ರಿಲೀಸ್ ಮಾಡಲು ರೆಡಿ: ಇಸ್ರೇಲ್ ಮಾತ್ರ ಒಪ್ಪುತ್ತಿಲ್ಲ ಎಂದು ಹಮಾಸ್ ಆರೋಪ

ನಾವು ಮಾನವೀಯ ನೆಲೆಯಲ್ಲಿ ಇನ್ನಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ತಯಾರಾಗಿದ್ದರೂ ಅವರನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿದೆ ಎಂದು ಹಮಾಸ್ ಆರೋಪ ಮಾಡಿದೆ. ಇತ್ತ ಈ ಆರೋಪವನ್ನು ಇಸ್ರೇಲ್ ತಳ್ಳಿ ಹಾಕಿದೆ.
ಕತರ್ ಜೊತೆಗೆ ನಡೆದ ಮಾತುಕತೆ ವೇಳೆ ಅಮೆರಿಕ ಪ್ರಜೆಗಳಾದ ಜುಡಿತ್ ಮತ್ತು ಅವರ ಪುತ್ರಿ ನತಾಲೀ ಅವರನ್ನು ಬಿಡುಗಡೆಗೊಳಿಸುವಾಗ ಇನ್ನೂ ಇಬ್ಬರನ್ನು ಬಿಡುಗಡೆಗೊಳಿಸುವುದಾಗಿ ನಾವು ಹೇಳಿದ್ದೆವು ಎಂದು ಹಮಾಸ್ ಸಶಸ್ತ್ರ ಘಟಕದ ವಕ್ತಾರ ಅಬು ಉಬೈದ್ ತಿಳಿಸಿದ್ದಾರೆ.
ಜುಡಿತ್ ಮತ್ತು ನತಾಲೀ ಅವರ ಬಿಡುಗಡೆಗೊಳಿಸುವ ಕಾರ್ಯವಿಧಾನದಲ್ಲೇ ಇನ್ನೂ ಇಬ್ಬರನ್ನು ಬಿಡುಗಡೆ ಮಾಡಲು ಹಮಾಸ್ ಸಿದ್ಧವಾಗಿತ್ತು ಎಂದು ಅವರು ಹೇಳಿದ್ದಾರೆ.
ಅ.7ರಂದು ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ನಡೆಸಿದ್ದ ಹಮಾಸ್ ಸುಮಾರು 210 ಇಸ್ರೇಲಿಯನ್ನರು ಸೇರಿದಂತೆ ಜನರನ್ನು ಸೆರೆ ಹಿಡಿದಿತ್ತು. ಆದರೆ, ಇದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ನಿರಾಕರಿಸಿದ್ದು, ಹಮಾಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಅಪರಹರಣಕ್ಕೊಳಗಾದ ಹಾಗೂ ನಾಪತ್ತೆಯಾಗಿರುವ ಎಲ್ಲರನ್ನೂ ಮರಳಿ ತರಲು ನಾವು ಎಲ್ಲಾ ರೀತಿಯ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ತಿಳಿಸಿದೆ.