ಹಾಸನ: ಕಾರು—ಟ್ರಕ್ ನಡುವೆ ಭೀಕರ ಅಪಘಾತ: ಬಾಲಕನ ಸಹಿತ 6 ಮಂದಿ ದಾರುಣ ಸಾವು

ಹಾಸನ: ಕಾರು ಮತ್ತು ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಬ್ಬ ಬಾಲಕ ಸೇರಿದಂತೆ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ.
ಕಾರು ಡ್ರೈವರ್ ನಿದ್ದೆಗಣ್ಣಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರ ಮೃತದೇಹ ಛಿದ್ರ ಛಿಧ್ರವಾಗಿದೆ.
ಬೆಳಗ್ಗಿನ ಜಾವ 5:30ರ ವೇಳೆ ಈ ಭೀಕರ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಎಸೆಯಲ್ಪಟ್ಟಿದ್ದು, ನಂತರ ಟ್ರಕ್ ಗೆ ಬಡಿದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ, ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ (ಬಾಲಕ), ರಾಕೇಶ್ (ಡ್ರೈವರ್) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರೊಬ್ಬರನ್ನು ಭೇಟಿ ಮಾಡಿಕೊಂಡು ವಾಪಾಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತಪಟ್ಟವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹಾಗೂ ದೇವನಹಳ್ಳಿ ತಾಲ್ಲೂಕಿನವರು ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರದ ಕಾರಿನಲ್ಲಿ ನಾರಾಯಣಪ್ಪ ಹಾಗೂ ರವಿಕುಮಾರ್ ಕುಟುಂಬದವರು ಎರಡು ದಿನದ ಹಿಂದೆ ಮಂಗಳೂರಿಗೆ ಹೋಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ತಮ್ಮವರನ್ನು ನೋಡಿಕೊಂಡು ಊರಿಗೆ ವಾಪಾಸ್ ಬರುತ್ತಿದ್ದರು. ರಾತ್ರಿಯೇ ಮಂಗಳೂರು ಕಡೆಯಿಂದ ಹೊರಟಿದ್ದು, ಬೆಳಿಗ್ಗೆ 7ರ ಹೊತ್ತಿಗೆ ಇನ್ನೇನು ಹಾಸನ ಮುಟ್ಟಬೇಕು ಎನ್ನುವಾಗ ಈಚನಹಳ್ಳಿ ಬಳಿ ನಿದ್ರೆ ಮಂಪರಿನಲ್ಲಿ ಚಾಲಕ ಇದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಎರಡು ವಾಹನಗಳು ವೇಗದಲ್ಲಿದ್ದುದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ. ನಿದ್ರೆಯಲ್ಲಿದ್ದವರು ಡಿಕ್ಕಿ ಹೊಡೆದ ವೇಗಕ್ಕೆ ಅದರಲ್ಲಿಯೇ ಸಿಲುಕಿಕೊಂಡಿದ್ದರು. ಕೂಡಲೇ ಹಾಸನ ಸಂಚಾರ ಠಾಣೆ ಪೊಲೀಸರು ಧಾವಿಸಿದರು. ರಸ್ತೆಯಲ್ಲಿನ ಸಂಚಾರ ಸರಿಪಡಿಸಿದರು. ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಈ ವೇಳೆ ಮೃತರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ದೃಶ್ಯ ಕಂಡು ಅಲ್ಲಿದ್ದವರು ಮರುಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟವರು ಚಿಕ್ಕಬಳ್ಳಾಪುರ ಕಡೆಯವರು ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳಿಗೆ ಕರೆ ಮಾಡಿ ವಿವರ ಪಡೆದುಕೊಂಡರು.
ಹಾಸನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068