ಪರೀಕ್ಷಾ ಹಾಲ್ ನಲ್ಲೇ ಹೃದಯಾಘಾತ: 15 ವರ್ಷದ ಬಾಲಕಿಯ ದುರಂತ ಸಾವು

04/11/2023
ಗುಜರಾತ್: ಕೋವಿಡ್ ಬಳಿಕ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ದೇಶಾದ್ಯಂತ ಕಳವಳ ಇದೆ. ಈ ಉತ್ತರವಿಲ್ಲದ ಸಾವಿನ ಪ್ರಶ್ನೆಗಳ ನಡುವೆಯೇ ಅಲ್ಲೊಬ್ಬರು ಇಲ್ಲೊಬ್ಬರು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ. ಇದೀಗ ಗುಜರಾತ್ ನ ರಾಜ್ ಕೋಟ್ ನಲ್ಲಿ ವಿದ್ಯಾರ್ಥಿನಿಯೋರ್ವಳು ಹಠಾತ್ ಸಾವಿಗೀಡಾಗಿದ್ದಾಳೆ.
ನವೆಂಬರ್ 3ರಂದು ಈ ಘಟನೆ ನಡೆದಿದೆ. ಗುಜರಾತ್ ನ ಅಮ್ರೇಲಿ ಪಟ್ಟಣದ ಶಾಂತಬಾ ಗಜೇರಾ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿರುವ 15 ವರ್ಷ ವಯಸ್ಸಿನ ಸಾಕ್ಷಿ ರಾಜೋಸರ ಎಂಬ ಬಾಲಕಿ ಪರೀಕ್ಷಾ ಕೊಠಡಿಯಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾಳೆ.
ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಕುಳಿತುಕೊಳ್ಳಲು ಸಿದ್ಧತೆ ಮಾಡುತ್ತಿದ್ದಂತೆಯೇ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ತಕ್ಷಣವೇ ರವಾನಿಸಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ವಿದ್ಯಾರ್ಥಿನಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರೋದರಿಂದ ಸಾವು ಸಂಭವಿಸಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.